ಕಂಡೆಯೇನೆ ಗೆಳತಿ…

ಕಂಡೆಯೇನೆ ಗೆಳತಿ…

ಮೊಗ್ಗು ಮಲ್ಲಿಗೆ ಮಾರು ಸಂಪಿಗೆ
ಕಾಕಡ ಗುಲಾಬಿ
ಹೂವು ಹೂವೆಂದು ಕೂಗುತ
ರವಿಯನ್ನು ಆಹ್ವಾನಿಸುತ
ನಗುವೆ ಆ ಪುಟ್ಟನ
ಕಂಡೆಯೇನೆ ಗೆಳತಿ ಕಂಡೆಯೇನೆ.

ಒಂದು ಕೊಂಡರೊಂದು ಕೊಟ್ಟು
ನಗುವ ಬೀರಿ ಬುಟ್ಟಿ ಹೊತ್ತು
ಹೊರಡುತ್ತಿದ್ದ ಪುಟ್ಟ ಹುಡುಗನ
ಕಂಡೆಯೇನೆ ಗೆಳತಿ ಕಂಡೆಯೇನೆ?

ಬಾಯಿ ತುಂಬಾ ಮಾತನಾಡಿ
ಹಾಲ್ಬೆಳಕ ನಗುವ ಚೆಲ್ಲಿ
ಮಾರು ಹೂವು ಕೈಯಲಿಟ್ಟು
ಮೇಲೊಂದು ಗುಲಾಬಿ ಕೊಟ್ಟು
ಹೊರಟು ಹೋದವನ
ಕಂಡೆಯೇನೆ ಗೆಳತಿ ಕಂಡೆಯೇನೆ?

ಮಾಸಿದ ಬಟ್ಟೆ, ಕೆದರಿದ ಕೂದಲು
ಮುಖದಲ್ಲೊಂದು ಮುಗುಳುನಗೆ
ಅಕ್ಕ ಎಂದು ಕೂಗುತ
ಹೂವು ಕೊಡಲೇ ಎನ್ನುತ
ಬಾಗಿಲಲ್ಲಿ ನಿಂತು ಕರೆಯುತ್ತಿದ್ದ
ಆ ಪೋರನ ಹೆಜ್ಜೆಗಳ
ಕಂಡೆಯೇನೆ ಗೆಳತಿ ಕಂಡೆಯೇನೆ


ದೇಸು ಆಲೂರು.