ಕಿಡ್ನಿ ವೈಫಲ್ಯ ಇದ್ದವರಿಗೆ ಕೊರೊನಾ ಸೋಂಕು ಅತಿ ಅಪಾಯಕಾರಿ

ದಾವಣಗೆರೆ, ಸೆ. 7- ಕಿಡ್ನಿ ವೈಫಲ್ಯ ಆದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರಿಗೆ ಕೊರೊನಾ ಸೋಂಕು ತೀವ್ರ ಅಪಾಯಕಾರಿ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರಜ್ಞ ಡಾ.ಎಸ್. ವಿಶ್ವನಾಥ್ ಹೇಳಿದರು. 

ಇಲ್ಲಿನ ಸಿದ್ದಗಂಗಾ ಶಾಲೆಯಲ್ಲಿ ಪತ್ರಕರ್ತರ ಸಂಘದಿಂದ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಕೋವಿಡ್ -19ರ ನಂತರ ಮೂತ್ರಪಿಂಡ ಆರೈಕೆ ಕುರಿತು ಉಪನ್ಯಾಸ ನೀಡಿದ ಅವರು, ಕಿಡ್ನಿ ವೈಫಲ್ಯ ಇದ್ದವರು ಕೊರೊನಾ ಸಂದರ್ಭದಲ್ಲಿ ತೀವ್ರ ರೀತಿಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದರು.

ಕಿಡ್ನಿ ವೈಫಲ್ಯ ಉಂಟಾಗುವ ಬಗ್ಗೆ ಆರಂಭದಲ್ಲಿ ಗುಣಲಕ್ಷಣಗಳು ತಿಳಿಯುವುದಿಲ್ಲ. ರೋಗಿಗೆ ಅದರ ಬಗ್ಗೆ ತಿಳಿಯುವ ಹೊತ್ತಿಗೆ ಶೇ.90ರಷ್ಟು ಕಿಡ್ನಿ ವೈಫಲ್ಯ ಉಂಟಾಗಿರುತ್ತದೆ ಎಂದರು.

ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲಿಯೇ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಹೆಚ್ಚು ಹೆಚ್ಚು ನೀರು ಕುಡಿಯಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಕಿಡ್ನಿ ತೊಂದರೆಗೆ ಯಾವ ಕಾರಣಕ್ಕೂ ಹೋಮಿಯೋ ಪತಿ ಅಥವಾ ಆಯುರ್ವೇದಿಕ್ ಚಿಕಿತ್ಸೆ ಪಡೆಯದಂತೆ ಸಲಹೆ ನೀಡಿದ ಅವರು, ಪ್ರತಿ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.