ಇದೋ! ಮುಗಿಸಿತಂದಿಹೆನ್ ನಿಮ್ಮಡಿಗಡಿಗರ್ಪಿಸಲ್ಕೆ ಗುರುವರ್ಯ

ಇದೋ! ಮುಗಿಸಿತಂದಿಹೆನ್ ನಿಮ್ಮಡಿಗಡಿಗರ್ಪಿಸಲ್ಕೆ ಗುರುವರ್ಯ

‘ಕಾಮ್ ಜ್ಞಾನ್ ನೇ ಕಿಯಾ ಜೋ ಕಾಮ್ ಆಂಧೀ ಕರ್‍ನಾ ಸಕ್ತೀ’ : ‘ಬಿರುಗಾಳಿ ಎಸಗದಿಹ ಕಾರ್ಯವನು ಜ್ಞಾನ ತಾನೆಸಗಿಹುದು’ ಎಂಬ ಉಕ್ತಿ ಎಂತಹ ವಿಷಮ ಸಮಯದಲ್ಲಿಯೂ ಜಾಗೃತಗೊಳಿಸಬಲ್ಲದು. ಸಾವಧಾನತೆಯೇ ಪರಾಕ್ರಮದ ಉತ್ತಮ ತರಹದ (Discration is the better part of valour) ಅಂಶವನ್ನು ಗಣನೆಗೆ ತರುವಲ್ಲಿ, ಮಾನವನ ಸಾಮರ್ಥ್ಯದ ಮಹಿಮೆಯನ್ನು ಮತ್ತು ಕ್ರಿಯಾಶೀಲತೆಗಳನ್ನು ಅವನ ಜ್ಞಾನ ಸ್ಥಳಗಳಲ್ಲಿ (The great end of life is not action but knowledge) ಮಾತ್ರ ಕಾಣುವ ಸಬಲತೆ, ಕಲ್ಪ ಕಲ್ಪಗಳಿಂದ ಸುತ್ತುತ್ತಿರುವ ಸೂರ್ಯನನುಭವ ಉರಿಯೆಡೆಗೆ ಚಿಟ್ಟೆಯನು ಸೆಳೆವ ಪ್ರೇಮದ ಆಯಸ್ಕಾಂತವೇ ಶಿಕ್ಷಕರದು. ಕಾಡು ಹಳ್ಳಿಯೊಂದರ ಮಣ್ಣಿನ ಮಕ್ಕಳ, ಅವರ ಹಬ್ಬ-ಹರಿದಿನಗಳ, ಅವರ ಒಡನಾಟ, ಅಲ್ಲಿನ ಕಾಡು, ಆ ಕಾಡಿನ ಪ್ರಾಣಿ ಪಕ್ಷಿಗಳ ಸಾಮೀಪ್ಯ ಇವು ಆ ಮಣ್ಣು ಹಡೆದ ಒಡಲಿಗೆ, ಭಾವಾಕೋಶವಾಗಿ ಪರಿಣಮಿಸಿದ ಪರಿಭಾವನೆಯ ಪರಿಜು ಪುತ್ಥಳಿಯೇ ಶಿಕ್ಷಕರು. 

ಕರ್ನಾಟಕದ ರಾಜಕೀಯ ಇತಿಹಾಸ ಕ್ರಿ.ಪೂ. 3ನೇ ಶತಮಾನದ ಶಾತವಾಹನರ ಕಾಲದಿಂದ ಆರಂಭವಾದರೂ, ಶೈಕ್ಷಣಿಕ ಇತಿಹಾಸ 4ನೇ ಶತಮಾನದ ಹಿಂದೆ ಜ್ಞಾನಕ್ಕಾಗಿಯೇ ಜೀವನವನ್ನು ಮೀಸಲಾಗಿಟ್ಟಿದ್ದ ವಿದ್ವಜ್ಜನರು, ಸಾಧು-ಸಂತರು ತಮ್ಮ ಗುಡಿಗಳಲ್ಲೋ, ವನಾಂತರ ಪ್ರದೇಶದ ತಮ್ಮ ಆಶ್ರಮಗಳಲ್ಲೋ ಒಲಿದು ಬಂದ ಜ್ಞಾನದಾಹಿಗಳಿಗೆ ಉಚಿತವಾಗಿ ಶಿಕ್ಷಣವೀಯುತ್ತಿದ್ದರು. ಶಿಕ್ಷಣವನ್ನು ಸಾರ್ವತ್ರೀಕರಿಸಿ ಜಾತಿ ಪದ್ಧತಿ, ಮತ, ಲಿಂಗ, ಯಾವ ಭೇದವೂ ಇಲ್ಲದೇ ಎಲ್ಲರಿಗೂ ಜ್ಞಾನವನ್ನು ನೀಡುತ್ತಿದ್ದುದು ಇತಿಹಾಸ ಸಾಕ್ಷಿಯಾಗಿದೆ. ಶಿಕ್ಷಕರು ಅಂದು ಮಬ್ಬಿಗೆ ಸಾಣೆ ಇಟ್ಟು; ಹೃದಯಕ್ಕೆ ವಿಚಾರಧಾರೆಯನ್ನು ಅದು ಎಲ್ಲಿಯೇ ಇರಲಿ, ಯಾರಲ್ಲಿಯೇ ಇರಲಿ, ಕಾಣುವ ವಿಶಾಲ ಗ್ರಾಸವನ್ನು ಗುರುತಿಸುವ ಔದಾರ್ಯವನ್ನು ಹಾಗೂ ಯೋಗ್ಯತೆ, ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದು ಪ್ರೀತಿ, ವಿನೋದ, ಸಹಾಯ, ಸೌಜನ್ಯಗಳಿಂದ ಒಲಿಸಿಕೊಂಡು ಬೋಧಿಸುವುದರಲ್ಲಿ ಶಿಕ್ಷಕರು ಶ್ರಮಿಕರಾಗಿದ್ದರು.

ಶಿಕ್ಷಕರು ಸಮಾಜದ ತರ್ಕ, ವ್ಯಾಜ್ಯ, ಪ್ರತಿಭಟನೆಗಳಲ್ಲಿ ಪ್ರವೇಶಿಸಿದರೂ ಪ್ರಶಾಂತ ಮನಸ್ಕರಾಗಿ, ಸತ್ಸಂಗ, ಆತ್ಮ ವಿಮರ್ಶೆ, ಅಂತರ್ಮುಖಗಳಿಂದ ಸುಸಂಸ್ಕೃತ (Introvert Culture) ರಾಗಿ, ಸಾಧುಗಳಂತಿದ್ದು, ತಲಸ್ಪರ್ಶಿಯಾದ ಪಾಂಡಿತ್ಯಕ್ಕೆ ಸಾಕ್ಷಿಯಾದಂತೆ, ಸಾಕಾರ ಮೂರ್ತಿಗಳಾಗಿ, ಜಂಗಮಿಗಳಾಗಿ, ಕ್ಲುಪ್ತ ಕಾಲದಲ್ಲಿ ಉತ್ಸವ ಭರಿತರಾಗಿ, ನಿರ್ಬಂಧದ ಸಂಕೋಲೆಗಳಿಂದ ಕಳಚಿಕೊಂಡು, ಸರಳವಾಗಿ, ಔಚಿತ್ಯಗಳನ್ನರಿತುಕೊಂಡು ಜನನ-ಮರಣ ಯಮಳಗಳನ್ನು ಮೆಟ್ಟಿ ನಿಂತು, ಹೂವು-ಹೂವೇ, ಎಲೆಯೋ!-ಸೇರಿ, ಬೆಳಸಿ, ಪರಿಮಳ ತೂಕವನ್ನು ಮೋಡ-ಮೋಡವಾಗಿ; ತುಂಡು-ತುಂಡಾಗಿ ಗಾಳಿಗೆ ಹೋಗದಂತೆ ಸಮಸ್ಕ ಕ್ರಮದಲ್ಲಿ, ಶಿಕ್ಷಣ ಕ್ಷೇತ್ರದ ಅತ್ಯುತ್ಸಾಹ ಉಬ್ಬಿನಲ್ಲಿ ಮನೋವೃತ್ತಿಯನ್ನು ಬೆಳೆಸಿಕೊಂಡವರು.

ಶಿಕ್ಷಕರು ಶಿಷ್ಯನನ್ನು ಕುರಿತು ಏಳು! ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುಂದಿನ ಕೆಲಸದಲ್ಲಿ ಪ್ರವೃತ್ತ ನಾಗು; ಯಾರ ಮನಸ್ಸನ್ನೂ ನೋಯಿಸಬಾರದು; ಎಲ್ಲರನ್ನೂ ಸಂತೋಷಪಡಿಸಬೇಕು ಎನ್ನುವುದು ಜೀವನದ ಮುಖ್ಯ ಸೂತ್ರವಾಗಬೇಕು; ಇದರ ಜೊತೆಗೆ ಗೌರವ, ಭಕ್ತಿ, ನಮ್ರತೆ, ವಿಶ್ವಾಸ, ಆದರ, ಸ್ನೇಹ, ವಾತ್ಸಲ್ಯ, ಮಮತೆ ಇವುಗಳನ್ನು ಸಂದರ್ಭಕ್ಕನುಗುಣವಾಗಿ ಸಾಧ್ಯವಾದಷ್ಟು ಹೆಚ್ಚು ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ನಡತೆಯನ್ನು ನಿರ್ಮಿಸಿಕೊಂಡು, ಆತ್ಮೀಯತೆಯನ್ನು ಸಂಪಾದಿಸಬೇಕೆಂದು ತಿದ್ದಿ-ತೀಡಿ-ತೇದು ತೊಡವಾಗುವಂತೆ ಹೇಳುವ ಸ್ವಾತಂತ್ರ್ಯ ಇವರಿಗೆ ಮಾತ್ರ ಸಾಧ್ಯ. ಅನೇಕ ಶಿಕ್ಷಕರಿಗೆ ದುಷ್ಟ ನಿಗ್ರಹದಲ್ಲಿ ನಂಬಿಕೆ ಇರುವುದಿಲ್ಲ. ‘ದುಷ್ಟಾನುಗ್ರಹ; ಶಿಷ್ಟಗೌರವ’ ಅವರ ವ್ಯಕ್ತಿತ್ವ ಸಂವಿಧಾನಕ್ಕೆ ಮೂಲ ಮಂತ್ರವಾಗುತ್ತದೆ. ಸ್ನೇಹ-ಸಾಧುತ್ವ ಹೊಂದಿಕೆಗಳಿಂದ ಸರಿಹೋದರೆ ಹೋಗಲಿ, ಇಲ್ಲದಿದ್ದರೆ ಅಪ್ರಿಯವಾದ ರೀತಿಯಲ್ಲಿ ವರ್ತಿಸಿ, ದುಷ್ಟರನ್ನು ತಿದ್ದುವುದು ಅನಾವಶ್ಯಕವೆಂದು ತಿಳಿದವರು. ಕಾಲಿಗೆ ಮುಳ್ಳು ಚುಚ್ಚಿದರೆ ಅದು ಹಾಗೆಯೇ ಕೊಳೆತು, ಕೊರಗಿ ಹೋಗಲಿ, ಅದನ್ನು ಸೂಜಿಯಿಂದ ಚುಚ್ಚಿ ತೆಗೆದು ಕಾಲು ನೋಯಿಸಿಕೊಳ್ಳುವುದು ಸರಿಯಲ್ಲವೆಂದು ಹೇಳುವ ಪ್ರವೃತ್ತಿಯವರು. ಹಲವರಲ್ಲಿ ಏಕತೆ, (Units of multicity)ಯನ್ನು, ಏಕತೆಯಲ್ಲಿ ಹಲವತೆ (Multicity of unit)ಯನ್ನು ಮನೋಹರ ಬಿಳುಪು ಬಣ್ಣಗಳಿಂದ ಸುತ್ತುವರಿದ ವಿಭಾವಗಳ ಕ್ರಿಯಾ ವಿಧಾನವನ್ನು ನಿಷ್ಪಕ್ಷಪಾತ (Disinterestedness) ವಾಗಿ ಸ್ಪಷ್ಟಗೊಳಿಸುವಲ್ಲಿ ಪ್ರಮಥರು. 

ಶಿಕ್ಷಕ ಬುದ್ದಿಜೀವಿ. ಈ ಜಗತ್ತಿನ ಮಿಕ್ಕೆಲ್ಲಾ ಜೀವಿಗಳಿಂದ ಈತನನ್ನು ಪ್ರತ್ಯೇಕಗೊಳಿಸಿರುವುದು ಅವನ ಬುದ್ದಿ-ಸತ್ಯ, ಬೌದ್ಧಿಕ ಶಕ್ತಿ, ತನ್ನ ಬುದ್ದಿ ಶಾಕ್ತತೆಯಿಂದ ಇಡೀ ಮನುಕುಲವನ್ನು ನೈತಿಕ ಸ್ಥಲದ ಮೇಲೆ ರೂಪಿಸುವ ಪ್ರಗಲ್ಭನೆಂಬ ಸಾಮರ್ಥ್ಯ (Competence) ದಿಂದ ಹಾಗೂ ಅಂತರ್‍ವಿನಿಮಯಕ್ಷಮತೆ (interchangeability) ವ್ಯಕ್ತಿತ್ವದ ವಿಶಿಷ್ಟತೆ (Personality in specelization)  ಮತ್ತು ಸಾಂಸ್ಕೃತಿಕ ಪ್ರಸರಣ (Cultral Transmission) ರಕ್ತಗತವಾಗಿ, ಅನುವಂಶೀಯತೀಕರಣದಿಂದ ಸಮಾಜದ, ಸಂಸ್ಕೃತಿಯ ಹಾಗೂ ಮನುಷ್ಯನ ಸಕಲ ಚಿಂತನೆಗೂ, ವ್ಯವಹಾರಕ್ಕೂ ಅಗತ್ಯವಾದ ಭಾಗವಾಗಿರುತ್ತಾನೆ. 

ಶಿಕ್ಷಕನಲ್ಲಿರುವ ಸ್ಮರಣೆ, ತಿಳುವಳಿಕೆಯ ಇರಾದೆ, ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವ ಪ್ರವೃತ್ತಿ ಮತ್ತು ಪರಸ್ಪರ ಸಂಬಂಧ ಮಾಹಿತಿಗಳನ್ನು ವಿಂಗಡಿಸಿ, ಅವುಗಳನ್ನು ವಿಶ್ಲೇಷಿಸಿ ಹೊಸ ವಿಚಾರಗಳಿಗೆ ನಾಂದಿ ಹಾಡುವ ‘ ಚಿಲಿಮಿಲಿಗ ಸತ್ಯಸ್ಯಸತ್ಯ.

ಶಿಕ್ಷಕನೊಬ್ಬ ಅನುಗಾಲ ಪ್ರವಾದಿ (Teacher is always prophet) ಎಂಬ ಹೆಗ್ಗಳಿಕೆಗೆ  ಪಾತ್ರನಾದ್ದರಿಂದ ಪ್ರತಿವರ್ಷ ಸೆಪ್ಟಂಬರ್ 5ನೇ ತಾರೀಖು ರಾಷ್ಟ್ರದಾದ್ಯಂತ ‘ಶಿಕ್ಷಕರ ದಿನ’ವೆಂದು ಆಚರಿಸುತ್ತಿರುವುದು ಇದಕ್ಕೆ ಸಾಕ್ಷಿಭೂತವಾಗಿದೆ.

ಗಮನಾರ್ಹ ವಿಷಯವೇನೆಂದರೆ, ಡಾ. ಸರ್ವಪಲ್ಲಿ ರಾಧಕೃಷ್ಣನ್‍ರವರ ಜನ್ಮ ದಿನವನ್ನೇ ‘ಶಿಕ್ಷಕರ ದಿನ’ವೆಂದು ಆಚರಿಸುವಲ್ಲಿ ಸ್ಪಷ್ಟತೆ ತೋರುತ್ತಿಲ್ಲ. ಶ್ರೀಯುತರ ಜನ್ಮದಿನ 05-09-1888 ಎಂದಿರುವುದರಲ್ಲಿ ಇವರ ಮಗನಾದ ಡಾ. ಸರ್ವಪಲ್ಲಿ ಗೋಪಾಲ್‍ರವರು (Radhakrishnan-A Bigrophy, Oxford University, Press 1969, P-10) 20-09-1887 ಜನ್ಮದಿನ ವೆಂದು ದಾಖಲಿಸಿದ್ದಾರೆ. ಜೊತೆಗೆ ಅಕ್ಟೋಬರ್ 5 ಅಂತರರಾಷ್ಟ್ರೀಯ ಶಿಕ್ಷಕರ ದಿನವೆಂದು ಯುನೆಸ್ಕೋ ಘೋಷಿಸಿರುವುದನ್ನು ಗಮನಿಸಬೇಕಾಗಿದೆ. ಆದ್ದರಿಂದ ‘ಶಿಕ್ಷಕರ ದಿನಾಚರಣೆ’ಯನ್ನು ಸಾಂಪ್ರದಾಯಿಕ ಉತ್ಸವದ ರೀತಿಯಲ್ಲಿ ಸೆಪ್ಟೆಂಬರ್ 5,ರಂದು ಆಚರಿಸುವುದು ಈಗಿರುವಂತೆಯೇ ಮುಂದುವರೆಸಿಕೊಂಡು ಸಾಗುವುದು ಸರಿಯೇ ಎನ್ನುವುದನ್ನು ವಿಚಾರಿಸಬೇಕಾಗಿದೆ. 

“ವಿದ್ಯಯ ಅಮೃತಮಶ್ನುತೇ”– ವಿದ್ಯೆಯಿಂದ ವ್ಯಕ್ತಿಯು ಅಮರತ್ವವನ್ನು ಸಾಧಿಸಬಲ್ಲ. ಶಿಕ್ಷಕರ ದಿನಾಚರಣೆಯ ಮೂಲ ಆಶಯ ಆಚರಣೆಯಲ್ಲ; ಅನುಸರಣೆ-ಅನುರಣನೆಯಲ್ಲಿದೆ. ಶಿಕ್ಷಕರ ದಿನಾಚರಣೆ-ಆಚಾರಾಧಾರಿತವಲ್ಲ; ವಿಚಾರಾಧಾರಿತ ದಿನಾಚರಣೆಯಾಗಬೇಕಾಗಿದೆ


ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು
ದವನ ಕಾಲೇಜು, ದಾವಣಗೆರೆ.
davancollege@gmail.com

   

Leave a Reply

Your email address will not be published.