ಜನಪದ ಸಿರಿಯಲ್ಲಿ ಶ್ರಾವಣ ಮಾಸ

ಜನಪದ ಸಿರಿಯಲ್ಲಿ ಶ್ರಾವಣ ಮಾಸ

ಇಂದು ಶ್ರಾವಣ ಮಾಸ. ಈ ಮಾಸದಲ್ಲಿ ಪ್ರಕೃತಿಯು ಹಸಿರನ್ನು ಉಟ್ಟುಕೊಂಡು ಮೈದುಂಬಿ ಮೆರೆಯುತ್ತಾಳೆ. ದ.ರಾ. ಬೇಂದ್ರೆ ಅವರು ಶ್ರಾವಣ ಮಾಸ ಕುರಿತು ಮನತುಂಬಿ ಹಾಡುತ್ತಾರೆ…

ಶ್ರಾವಣ ಬಂತು ಕಾಡಿಗೆ| ಬಂತು ನಾಡಿಗೆ
ಬಂತು ಬೀಡಿಗೆ|ಶ್ರಾವಣ ಬಂತು||

ಜನಪದ ಸಾಹಿತ್ಯದ ಸೌಂದರ್ಯವಿರುವುದು ಅದರ ಸರಳತೆ ಮತ್ತು ಸಹಜತೆಗಳಲ್ಲಿ. ಅನುಭವ ತುಂಬಿ ಬಂದಾಗ ಆಡುವ ಮಾತೆಲ್ಲವೂ ಕಾವ್ಯಮಯವಾಗುತ್ತದೆ ಎಂಬುದಕ್ಕೆ ಜಾನಪದ ಗೀತೆಗಳು ಒಳ್ಳೆಯ ಉದಾಹರಣೆ. ಜಾನಪದ ಕವಿಗಳು ಕೊಡುವ ನುಡಿ ಚಿತ್ರಗಳು, ವರ್ಣನೆಗಳೂ ಮಾತಿನ ಮೋಡಿ, ಅಲಂಕಾರಗಳ ಗಾರುಡಿ, ಅಚ್ಚಳಿಯದ ಪರಿಣಾಮವನ್ನುಂಟು ಮಾಡುವಂತಹವು.

ಜಾನಪದ ಕವಿ ಕಟ್ಟಿರುವ ಕುಣಿಗಲ್ ಕೆರೆಯ ವರ್ಣನೆಯಂತೂ ಸುಪ್ರಸಿದ್ಧವಾಗಿದೆ. ಅದನ್ನಿಲ್ಲಿ ನೋಡಬಹುದು.

ಮೂಡಲ್ ಕುಣಿಗಲ್ ಕೆರೆ, ನೋಡೋರ್ಗೊಂದು ವೈಭೋಗ
ಮೂಡಿ ಬರ್ತಾನೆ ಚಂದಿರಾಮ|
ಮೂಡಿ ಬರ್ತಾನೆ ಚಂದಿರಾಮ||

ಚಲುವಯ್ಯ ಚಲುವೋ|ತಾನಿತಂದನಾ
ಚಿನ್ಮಯ್ಯ ರೂಪೇ| ಕೋಲನ್ನ ಕೋಲೆ||

ಮದುವೆಯೆಂಬುದು ಗಂಡಿನ ದೃಷ್ಟಿಯಿಂದ ಕೇವಲ ಪಡೆಯುವಿಕೆ, ತನ್ನ ಪತ್ನಿಯನ್ನು ಕರೆತಂದು ತನ್ನ ಮನೆಯನ್ನು ತುಂಬಿಕೊಳ್ಳುತ್ತಾನೆ. ಆತ ಹೆಣ್ಣಿಗೂ ಅದು ಪಡೆಯುವಿಕೆಯೇನೂ ಹೌದು. ತನ್ನ ಜೀವನದ ಸಂಗಾತಿಯನ್ನು ಆಕೆ ಪಡೆಯುತ್ತಾಳೆ. ಒಡನಾಡಿ ಬೆಳೆದ ಅಣ್ಣ-ತಮ್ಮಂದಿರನ್ನು, ಅಕ್ಕ – ತಂಗಿಯನ್ನು ಬಿಟ್ಟು ಬರಬೇಕಾಗುತ್ತದೆ. ಹೊಸ ಪರಿಸರದಲ್ಲಿ  ಬಾಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಈ ಸನ್ನಿವೇಶ ಜನಪದ ಸಾಹಿತ್ಯಕ್ಕೆ ವಿಶೇಷ ಪ್ರಚೋದನೆಯನ್ನು ಕೊಟ್ಟಿದೆ.

ಮಾನವೀಯ ಭಾವನೆಗಳ ಅಭಿವ್ಯಕ್ತಿಗೆ ಇದು ಅತ್ಯುತ್ತಮ ಸನ್ನಿವೇಶ. ಮಗಳನ್ನು ಕಳುಹಿಸುವ ತಂದೆ-ತಾಯಿಗಳಿಗೆ, ಮದುವೆ ಮಾಡಿದ ಕೃತಾರ್ಥ ಭಾವವಿದ್ದರೂ ಅಗಲುವಿಕೆಯ ದುಃಖ ಮಿಡಿಯುತ್ತದೆ.

ಹೆಣ್ಣು ಹಡೆಯಲು ಬ್ಯಾಡ, ಹೆರವರಿಗೆ ಕೊಡಬ್ಯಾಡ|
ಹೆಣ್ಣು ಹೋದಾಗ ಅಳಬ್ಯಾಡ|
ಹಡೆದವ್ವ ಸಿಟ್ಟಾಗಿ ಶಿವನ ಬೈಬ್ಯಾಡ||

ಹೆಣ್ಣು ಮಗಳು ಕೂಡ ತೌರಮನೆಯಿಂದ ಮನಸ್ಸಿಲ್ಲದ ಮನಸಿಂದ ಮೊದಲ ಬಾರಿಗೆ ಗಂಡನ ಮನೆಗೆ ಪ್ರವೇಶಿಸುತ್ತಾಳೆ. ತನ್ನ ಅಣ್ಣ ತಮ್ಮವರಿಗೆ ಸಂದೇಶ ನೀಡುತ್ತಾಳೆ.

ತವರೂರ ದಾರ್ಯಾಗ ಕಲ್ಲಿಲ್ಲ ಮುಳ್ಳಿಲ್ಲ|
ಸಾಸುವೆಯಷ್ಟು ಮರಳಿಲ್ಲ|
ಬಿಸಿಲೀನ ಬೇಗೆ ಸುಡಲಿಲ್ಲ||
ತವರೂರ ಹಾದ್ಯಾಗ ಗಿಡವೆಲ್ಲ ಮಲ್ಲೀಗಿ|
ಹೂವರಳಿ ಪರಿಮಳ ಘಮ್ಮೆಂದು| ನಾಕೊಯ್ದು
ಗಿಡಕೊಂದು ಹೂವ ಮುಡಿದೇನ||
ತವರೂರ ಹಾದೀಲಿ ತೆಗಸಣ್ಣ ಬಾವೀಯ|
ಅಕ್ಕ-ತಂಗೀರು ತಿರುಗಾಡೋ ದಾರೀಲಿ|
ತಗೆಸಣ್ಣ ಕಲ್ಯಾಣದ ಕೊಳಗಳ||

ತೌರು ಮನೆಯ, ಗಂಡನ ಮನೆಗಳ ಒಡನಾಡಿಯಾದ ಹೆಣ್ಣು ಒಂದೆಡೆ ಮನೆಯ ಆರತಿ, ಮತ್ತೊಂದೆಡೆ ಮನೆಯ ಕೀರುತಿ ತರುವ ಪಣತೊಟ್ಟು, ದುಃಖದಿಂದಲೇ ಗಂಡನ ಮನೆ ಸೇರುತ್ತಾಳೆ. ತೌರು ಮನೆ ಬಗ್ಗೆ ಆಕೆಗೆ ಅಪಾರ ಪ್ರೀತಿ, ಅಣ್ಣ-ತಮ್ಮಂದಿರ ಮನದಲ್ಲೇ ನೆನೆಯುತ್ತಾ ಬಾಂಧವ್ಯದ ಬೆಸುಗೆಯ ಹಾಡುತ್ತಾಳೆ, ಅನೇಕ ಪುಸ್ತಕಗಳು ಜನಪದ ಸಾಹಿತ್ಯದಲ್ಲಿ ಮೈವೆತ್ತಿವೆ.

ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು|
ಬೆನ್ನು ಕಟ್ಟುವರು ಸಭೆಯೊಳಗೆ| ಸಾವಿರ
ಹೊನ್ನು ಕಟ್ಟುವರು ಉಡಿಯೊಳಗೆ||
ಎನಗೆ ಯಾರಿಲ್ಲಂತ ಮನದಾಗ ಮರುಗಿದರ|
ಪರನಾಡಲೊಬ್ಬ ಪ್ರತಿಸೂರ್ಯ | ನನ್ನ ಅಣ್ಣ
ಬಿದಿಗಿ ಚಂದ್ರಾಮ ಉದಯಾದ||

ಅಣ್ಣ-ತಂಗಿಯ ಪ್ರೀತಿ ಅನನ್ಯ. ಮರೆಯಲಾರದ ಚಿರ ನೆನಪಿನ ಗಣಿ, ಜನ್ಮ-ಜನ್ಮದ ಅನುಬಂಧ. ಆಕೆಗೆ ತೌರಿನ ಮೇಲಿನ ಪ್ರೀತಿ, ಅಣ್ಣ-ತಮ್ಮಂದಿರ ಬಗ್ಗೆ ಹೊಂದಿರುವ ಬಾಂಧವ್ಯ ರಕ್ಷಾಬಂಧನ ಹಬ್ಬದಲ್ಲಿ ಸಮ್ಮಿಳಿತಗೊಂಡಿದೆ.

ಮನೆಯ ಹಿಂದಿನ ಮಾವು ನೆನೆದರೆ ಘಮ್ಮೆಂದು
ನೆನೆದಂಗ ಬಂದ ನನ್ನ ಅಣ್ಣ| ಬಾಳಿಯ
ಗೊನಿಹಾಂಗ ತೋಳ ತಿರುವುತ||
ಸರದಾರ ಬರುವಾಗ ಸುರಿದಾವ ಮಲ್ಲಿಗಿ
ದೊರೆ ನನ್ನ ತಮ್ಮ ಬರುವಾಗ| ಯಾಲಕ್ಕಿ
ಗೊನಿಬಾಗಿ| ಹಾಲ ಸುರಿದಾವ||
ಹೀಗೆ ಶ್ರಾವಣ ಮಾಸದಲ್ಲಿ ಹೆಣ್ಣಿನ ತವರು ಮನೆ ಮತ್ತು ಗಂಡನ ಮನೆಯ ಚಿತ್ರಣ ಸೊಗಸಾಗಿ ಜಾನಪದ ಸಾಹಿತ್ಯದಲ್ಲಿ ಅರಳಿ-ಪರಿಮಳ ಬೀರಿದೆ.


 

ಜಂಬಿಗಿ ಮೃತ್ಯುಂಜಯ,
ಕನ್ನಡ ಉಪನ್ಯಾಸಕರು, ದಾವಣಗೆರೆ.