ರೈತರ ಸಾವು ಬದುಕಿನ ಹೋರಾಟ

ರೈತರ ಸಾವು ಬದುಕಿನ ಹೋರಾಟ

ಬರಬೇಕೆ ಮಹಾಮಾರಿ ಕೊರೊನಾ
ರೈತನಾ ಬಾಳಲಿ ಹೆಮ್ಮಾರಿಯಂತೆ
ಕಿತ್ತು ತಿನ್ನುವ ಬಡತನದ ಬೇಗೆ
ಬಿತ್ತಿದ ಬೆಳೆಯೂ ನಾಶವಾಗೆ
ಭೂಮಿಯೆಲ್ಲಾ ಬೆತ್ತಲಾಗಿ
ಬದುಕುವಾಸೆ ಕತ್ತಲಾಗಿ
ಒಂದೊಳ್ಳೆಯ ದಿನಕ್ಕಾಗಿ ಕಂಬನಿಗರೆದಿದೆ!!

ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?

ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಈ ಮಹಾಮಾರಿಯನ್ನು ಓಡಿಸಿ ಉಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ.

ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ
 ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರು ನೂರು.

ಭಾಷಣ ಬಿಗಿಯುವ ಪುಢಾರಿಗಳಿಗೆ
ಹೇಳಿಕೊಡಬೇಕೇ ಮೊಸಳೆ ಕಣ್ಣೀರು
ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ
ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಯ ಸಂಭ್ರಮ.

ಅಜ್ಜನ ತುತ್ತು, ಅಜ್ಜಿಯ ತುತ್ತು,
ಅಪ್ಪನ ತುತ್ತು, ಅಮ್ಮನ ತುತ್ತು,
ಬರದ ತುತ್ತು, ದೇವರ ತುತ್ತು,
ಸಾಲಿಗನ ತುತ್ತು, ಪುಢಾರಿ – ಪಾಷಂಡಿಗಳ ತುತ್ತು,
ಬೆವರ ಕಂಬನಿಯ ತುತ್ತು, ಇದೀಗಾ ಕೊರೊನಾ ತುತ್ತು.

ಬನ್ನಿ ಹೋಗೋಣ ಮನುಜರನು
ಮನುಜರಂತೆ ನೋಡುವಾ ತಾಣಕೆ
ಹಸಿವಿರದ, ನೋವಿರದ, ಅಪಮಾನವಿರದ ಜಾಗಕೆ
ಚಿರಶಾಂತಿಯ ನಿದ್ರೆಗೆ.

ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ
ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಷಾಡಭೂತಿ
ಬದುಕಿದಾಗ ಬೊಬ್ಬೆ ಇಟ್ಟರೂ ಬಾರದಾ ಇವರು,
ಸತ್ತಾಗ ಬಂದು ಸಾಂತ್ವನ ಮಾಡುವರು.

ರೈತರ ಸಾವು-ಬದುಕಿನ ಹೋರಾಟ
ಇವರಿಗಂತೆ ಚದುರಂಗದಾಟ
ಸತ್ತ ಹೆಣದ ಮೇಲೆ ಮದಿರೆಯ ಕಾಯಿಸಿ
ಮದದಿ ಮೆರೆದಾಡುವ ಮಾನಗೇಡಿಗಳು,
ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.

ರೈತರ ಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ …


ಪ್ರೀತಿ. ಟಿ. ಎಸ್
preethimodaliyar@gmail.com

Comments are closed.