ಮಂಡೆ ಮಜಾ…. ಸಂಡೇ ಸಜಾ !

ಮಂಡೆ ಮಜಾ…. ಸಂಡೇ ಸಜಾ !

ಹಲೋ ಬ್ರೋ ಹೇಗಿದ್ದೀಯಾ?

ಚೆನ್ನಾಗಿದ್ದೇನೆ ಬ್ರೋ. ಹೌ ಅಬೌಟ್ ಯೂ?

ಫ್ರಸ್ಟ್ರೇಟೆಡ್! ಈ ಸಂಡೇ ಯಾಕಾದ್ರೂ ಬಂತೋ. ಐ ಕಾಂಟ್ ಡೈಜೆಸ್ಟ್.

ಯಾಕೆ? ಏನಾಯ್ತು ಕೂಲ್. ಈ ಲಾಕ್ ಡೌನ್ ನಲ್ಲಿ ಎವರಿ ಡೇ ಸಂಡೇ ಅಲ್ವೇನೋ?

ಅದು ಸರಿ. ಈಗ ಪ್ರತಿದಿನ ಬೆಳಿಗ್ಗೆ ಏಳರಿಂದ ಸಂಜೆ ಏಳರವರೆಗೆ ಸ್ವಲ್ಪ ನೆಪ ಮಾಡ್ಕೊಂಡು ಹೊರಗೆ ಹೋಗಬಹುದಿತ್ತು. ಇವಾಗ ಸಂಡೇ, ಯಾವ ಕಾರಣಕ್ಕೂ ಹೊರಗೆ ಬರಂಗಿಲ್ವಂತೆ. ಮನೆಯಲ್ಲಿ ಒಬ್ಬನೇ ಆಗಿದೀನಿ. ಮಮ್ಮಿ ಡ್ಯಾಡಿ ಬೆಳಿಗ್ಗೆ ಅಂಕಲ್ ಮನೆಗೆ ಹೋದೋರು ಅಲ್ಲಿಯೇ ಸ್ಟಕ್ ಆಗಿದ್ದಾರೆ. ಮಂಡೇ ಮಾರ್ನಿಂಗ್ ಬರ್ತೀವಿ ಅಂತಾ ಫೋನ್ ಮಾಡಿದ್ರು.

ವಾವ್! ಮನೆಯಲ್ಲಿ ಈಗ ನೀನು ಒಬ್ಬನೇ. ಎಂಜಾಯ್ ಮಾಡು. ಜಸ್ಟ್ ಚಿಲ್ !

ಮನೆ ಆಗಿದೆ ನನಗೆ ಜೈಲ್! ಅಲ್ಲಾ ಡ್ಯೂಡ್, ಬೇರೆ ದಿನ ಆದ್ರೆ ಹೊರಗೆ ಬರಬಹುದಂತೆ. ಸಂಡೇ ಮಾತ್ರ ಬರಂಗಿಲ್ಲ. ಈ ಕೊರೊನಾ ಸಂಡೇ ಮಾತ್ರ ಹೊರಗೆ ಓಡಾಡುತ್ತಾ?

ಹಾಗಲ್ಲಾ ಬ್ರೋ. ಈ ಸಂಡೇ ಅನ್ನೋದು ಅಫಿಸಿಯಲ್ಸ್ ಇಂದಾ ಹಿಡಿದು ಎಲ್ಲರಿಗೂ ರಜಾ. ಎಲ್ಲರೂ ಶಾಪಿಂಗ್ ಗೆ ಅದಕ್ಕೆ ಇದಕ್ಕೆ ಅಂತಾ ಜಾಸ್ತಿ ಹೊರಗಡೆಗೆ ಬರ್ತಾರೆ. ಆಮೇಲೆ ಗುಂಪು ಸೇರ್ತಾರೆ. ಕೊರೊನಾ ಇದನ್ನೇ ವೇಟ್ ಮಾಡ್ತಾ ಇರುತ್ತೆ. ನಿನಗೆ ಗೊತ್ತಲ್ಲಾ ಗುಂಪು ಆದ್ರೇ ಗೋವಿಂದಾ!

ಈಗ ಸಂಡೇ ಅನ್ನೋದು ರಜಾ ಅಲ್ಲಾ. ಸಜಾ! ಅಲ್ಲಾ ಬಾಸು ಈ ಸರಕಾರದ್ದು ಏನು ಲಾಜಿಕ್ ಅಂತಾನೆ ಅರ್ಥಾ ಆಗ್ತಿಲ್ಲ! ಬಸ್ ಗಳಲ್ಲಿ ಓನ್ಲೀ ಮೂವತ್ತು ಜನ ಟ್ರಾವೆಲ್ ಮಾಡಬಹುದಂತೆ. ಯಾಕೆ ಮೂವತ್ತೊಂದನೇ ಪ್ಯಾಸೆಂಜರ್ ಹತ್ತಿಸ್ಕೊಂಡ್ರೇ ಮಾತ್ರ ಕೊರೊನಾ ಬರುತ್ತಾ?

ನೋಡು ಸೀಟಿಗೆ ಒಬ್ಬೊಬ್ಬರಂತೆ ಕೂರುಸ್ತಾರೆ. ಇನ್ನೊಬ್ಬ ಜಾಸ್ತಿ ಆದ ಅಂದ್ರೆ ಅವನನ್ನ ಎಲ್ಲಿ ಕೂರಿಸೋದು? ಆಗ ಕುಳಿತವರು ನನ್ನ ಪಕ್ಕಕ್ಕೆ ಇನ್ನೊಬ್ಬ ಪ್ಯಾಸೆಂಜರ್ ನ ಕೂರಿಸೋಂಗಿಲ್ಲ ಅಂತಾ ಎಲ್ಲರೂ ರಿಜೆಕ್ಟ್ ಮಾಡ್ತಾರೆ. ಎಲ್ಲರಿಗೂ ಕೊರೊನಾ ಎಲ್ಲಿ ಅಟ್ಯಾಚ್ ಆಗಿ ಬಿಡುತ್ತೋ ಅನ್ನೋ ಭಯ. ಎಕ್ಸ್ಟ್ರಾ  ಹತ್ತಿದೋನು, ನಾನು ಇಲ್ಲಿಯೇ ಕೂರ್ತಿನಿ ಯಾಕೆ ನಾನೂ ಟಿಕೆಟ್ ತಗೋಂಡಿಲ್ವಾ. ಬಸ್ ಏನು ನಿನ್ನ ಅಪ್ಪನದಾ ಅಂತಾ ಜಗಳಕ್ಕೆ ನಿಲ್ತಾನೆ. ಮಾತಿಗೆ ಮಾತು ಬೆಳೆದು ಗಲಾಟೆ ಶುರು ಆಗುತ್ತೆ. ಆಗ ಗುಂಪು ಸೇರುತ್ತೆ. ಕೊರೊನಾ ಕಾಯ್ತಾ ಇರುತ್ತೆ. ನಿನಗೆ ಗೊತ್ತಲ್ಲಾ ಗುಂಪು ಸೇರಿದ್ರೇ ಗೋವಿಂದಾ !

ಆಯ್ತಪ್ಪಾ. ಐ ಅಗ್ರೀಡ್. ಆ ವಿಷಯ ಹೋಗಲಿ ಬಿಡು. ನಾವು ವೈನ್ ಶಾಪ್ ನಲ್ಲಿ ಕ್ಯೂ ನಿಂತು ಡ್ರಿಂಕ್ಸ್ ಖರೀದಿ ಮಾಡಬಹುದು. ಮನೆಯಲ್ಲಿ ಹೋಗಿ ಕುಡಿಬಹುದು. ಆದರೆ, ಬಾರ್ ಅಂಡ್ ರೆಸ್ಟೋರೆಂಟ್ ಎಲ್ಲಾ ಕ್ಲೋಸು. ಅಲ್ಲಿ ಹೋಗಿ ಕುಡಿಯೋಂಗಿಲ್ಲ. ಅಂದರೇ ಬಾರ್, ರೆಸ್ಟೋರೆಂಟಲ್ಲೀ ಕೊರೊನಾ ಬರುತ್ತೇ. ವೈನ್ ಶಾಪಲ್ಲಿ ಬರಂಗಿಲ್ವಾ?

ಗುರೂ ಟ್ರೈ ಟು ಅಂಡರ್ ಸ್ಟ್ಯಾಂಡ್. ವೈನ್ ಶಾಪಲ್ಲಿ ಸೋಷಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಿ ಕ್ಯೂನಲ್ಲಿ ನಿಂತು ಡ್ರಿಂಕ್ಸ್ ಪರ್ಚೇಸ್ ಮಾಡ್ತೀವಿ. ಆಮ್ ಐ ರೈಟ್?

ಹೌದೂ!

ಅದೇ ಬಾರಲ್ಲಿ, ರೆಸ್ಟೋರೆಂಟಲ್ಲಿ ಆದರೆ ಟೇಬಲ್ಲಿಗೆ ಮಿನಿಮಮ್ ಇಬ್ಬರನ್ನು ಕೂರುಸ್ತಾರೆ ಅಂತಾ ಇಟ್ಕೋ. ಇಬ್ಬರು ಕೂತ್ಕೊಂಡು ಚೀಯರ್ಸ್ ಹೇಳ್ತಾರೆ.

ಅದಪ್ಪಾ ಮಜಾ! ಆವಾಗ್ಲೇ ಥ್ರಿಲ್ ಸಿಗೋದು. ಕಿಕ್ ಏರೋದು. ಇಲ್ದಿದ್ರೇ ಡ್ರಿಂಕ್ಸ್ ಯಾಕೆ ತಗೋಬೇಕು!?

ಅಲ್ಲೇ ಇರೋದು ಪಾಯಿಂಟ್. ಕಿಕ್ ಏರ್ತಾ.. ಏರ್ತಾ..ಕುಡಿಯೋರು ಕಿತ್ತಾಡಕ್ಕೆ ಶುರು ಮಾಡಿದ್ರೆ? ಆ ಟೇಬಲ್ಲಿನೋರು, ಈ ಟೇಬಲ್ಲಿನ್ನೋರು ಗ್ಲಾಸು, ಬಾಟಲ್ಲೂ ತೂರಾಡಿದ್ರೇ ಕುಡುಕರು ಗುಂಪು ಸೇರ್ತಾರೆ, ಕುಡುಕರೆಲ್ಲಾ ಕಾದಾಡಿದ್ರೇ…

ಅರ್ಥ ಆಯ್ತು.. ಗೋವಿಂದಾ !

ಅಲ್ಲಾ ಗುಂಪು ಸೇರಿದ್ರೇ ಮಾತ್ರ ಗೋವಿಂದಾ

ಮತ್ತೇ ಕುಡುಕರು ಕಾದಾಡಿದ್ರೇ

ಕೋವಿಂಡಾ !!!

ಆರ್.ಟಿ. ಅರುಣ್‌ಕುಮಾರ್
arunartist@gmail.com