ಮಳೆ: ಕೊಯ್ಲಿಗೆ ಬಂದಿದ್ದ ಭತ್ತಕ್ಕೆ ಹಾನಿ

ಮಳೆ: ಕೊಯ್ಲಿಗೆ ಬಂದಿದ್ದ ಭತ್ತಕ್ಕೆ ಹಾನಿ

ಜಿಲ್ಲೆಯಲ್ಲಿ 30 ಮೀ.ಮೀ. ಮಳೆ, 52.26 ಲಕ್ಷ ರೂ. ಹಾನಿ
ದಾವಣಗೆರೆ, ಮೇ 18- ಸೋಮವಾರ ಮುಂಜಾನೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಒಟ್ಟಾರೆ ಸರಾಸರಿ 30 ಮಿ.ಮೀ. ಮಳೆಯಾಗಿದ್ದು, 52.26 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ.
ಕೆಲವೆಡೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರನ್ನು ಕಂಗಾಲಾಗಿಸಿದೆ.  ಹರಿಹರ ತಾಲ್ಲೂಕಿನಲ್ಲಿಯೇ ಸುಮಾರು 857.25 ಎಕರೆ ಭತ್ತ ಹಾಗೂ ಬಾಳೆ ಬೆಳೆ ಹಾನಿಯಾಗಿದೆ. 46.36 ಲಕ್ಷ ರೂ. ನಷ್ಟ ಸಂಭವಿಸಿದೆ. ಜೊತೆಗೆ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 10 ಸಾವಿರ ರೂ. ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 2.6 ಮಿ.ಮೀ., ದಾವಣಗೆರೆ 32.3 ಮಿ.ಮೀ., ಹರಿಹರದಲ್ಲಿ 26.3 ಮಿ.ಮೀ., ಹೊನ್ನಾಳಿ 28 ಮಿ.ಮೀ. ಹಾಗೂ ಜಗಳೂರು ತಾಲ್ಲೂಕಿನಲ್ಲಿ 24 ಮಿ.ಮೀ. ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 5 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿವೆ. ನಷ್ಟ 50 ಸಾವಿರ ರೂ. ಅಂದಾಜಿಸಲಾಗಿದೆ. ಕೋಡಿಹಳ್ಳಿ ಗ್ರಾಮದಲ್ಲಿ 8 ಎಕರೆ  ಭತ್ತದ ಬೆಳೆ, ಐಗೂರು ಗ್ರಾಮದಲ್ಲಿ 2 ಎಕರೆ ಎಲೆಬಳ್ಳಿ, ಕುರ್ಕಿಯಲ್ಲಿ 0.10 ಎಕರೆ ಅಡಿಕೆ ಹಾಗೂ ರಂಗವ್ವನಹಳ್ಳಿ ಗ್ರಾಮದಲ್ಲಿ 0.05 ಎಕರೆ ಅಡಿಕೆ ಬೆಳೆ ಸೇರಿ ಒಟ್ಟು 10.15 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 1.30 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.
ನ್ಯಾಮತಿ ತಾಲ್ಲೂಕಿನಲ್ಲಿ 4 ಪಕ್ಕಾ ಮನೆಗಳು ಹಾಗೂ 1 ದನದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದೆ. ಮನೆಗಳಿಗೆ 1 ಲಕ್ಷ ರೂ. ಹಾಗೂ ದನದ ಕೊಟ್ಟಿಗೆಗೆ 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದ್ದು,  ತಾಲ್ಲೂಕಿನಲ್ಲಿ 3.10 ಎಕರೆ ಬೆಳೆ ಹಾನಿಯಾಗಿದ್ದು 2.50 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 4 ಕಚ್ಚಾ ಮನೆಗಳಿಗ ಭಾಗಶಃ ಹಾನಿಯಾಗಿದ್ದು, 20 ಸಾವಿರ ರೂ. ನಷ್ಟ ಸಂಭವಿಸಿದೆ.