ಜಿಲ್ಲೆಯಲ್ಲಿ ಮೊದಲ ದಿನ 50 ಬಸ್

ಜಿಲ್ಲೆಯಲ್ಲಿ ಮೊದಲ ದಿನ 50 ಬಸ್

ದಾವಣಗೆರೆ, ಮೇ 18 – ಕೆಎಸ್‌ಆರ್‌ಟಿಸಿ ಬಸ್ ಸೇವೆ ಮಂಗಳವಾರ ಬೆಳಿಗ್ಗೆ 7ರಿಂದಲೇ ಚಾಲನೆಯಾಗಲಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯ ಅನ್ವಯ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಕಾರ್ಯ ನಿರ್ವಹಣೆ ಮಾಡಲಿವೆ. ಮೊದಲ ದಿನದಂದು 50 ಬಸ್‌ಗಳನ್ನು ಬಿಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದ್ದಾರೆ.
ಈ ಬಸ್‌ಗಳಲ್ಲಿ ಹತ್ತು ನಗರ ಸಾರಿಗೆಯ ವಾಗಿರಲಿವೆ. ಬೆಂಗಳೂರಿಗೆ ಹತ್ತು ಬಸ್‌ಗಳನ್ನು ಬಿಡಲಾಗುವುದು. ಹೊಸಪೇಟೆ, ಶಿವಮೊಗ್ಗ, ರಾಣೇಬೆನ್ನೂರು, ಚಿತ್ರದುರ್ಗ ಮುಂತಾದ ಕಡೆಗಳಿಗೆ ಉಳಿದ ಬಸ್‌ಗಳು ತಲಾ ಎರಡರಂತೆ ಸಂಚರಿಸಲಿವೆ ಎಂದವರು ಹೇಳಿದ್ದಾರೆ. ಸಾಮಾಜಿಕ ಅಂತರ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಬಸ್‌ಗಳು ಕಾರ್ಯ ನಿರ್ವಹಿಸಲಿವೆ. ಪ್ರತಿ ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶ ಇರಲಿದೆ ಎಂದವರು ಹೇಳಿದ್ದಾರೆ. ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಗುರುತಿನ ಚೀಟಿ ವಿವರಗಳನ್ನು ಕಂಡಕ್ಟರ್‌ಗೆ ನೀಡುವುದು ಕಡ್ಡಾಯವಾಗಿರ ಲಿದೆ. ಬಸ್ ಹತ್ತುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು ಎಂದು ಸಿದ್ದೇಶ್ವರ ಹೇಳಿದ್ದಾರೆ.

ಅಲ್ಲದೇ ಮೊದಲಿನ ರೀತಿಯಲ್ಲಿ ಸ್ಟಾಪ್‌ಗಳಿರುವುದಿಲ್ಲ. ಬಸ್‌ ನಿಲ್ದಾಣದಲ್ಲಿ ಹತ್ತಿದ ನಂತರ, ಕೊನೆಯ ಸ್ಟಾಪ್‌ನಲ್ಲಿ ನಿಲ್ಲಲಿದೆ. ನಡುವೆ ಎಲ್ಲೂ ಸಹ ಇಳಿಯಲು ಇಲ್ಲವೇ ಹತ್ತಲು ಅವಕಾಶ ಇರುವುದಿಲ್ಲ ಎಂದವರು ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸ್ಯಾನಿಟೈಜರ್ ಸೇರಿದಂತೆ ಬಸ್‌ನಲ್ಲಿ ಸುರಕ್ಷ ತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ಸಾರಿಗೆ ಸವಾಲು : ರಾಜ್ಯ ಸರ್ಕಾರ ಬಸ್‌ ಸೇವೆಗೆ ಚಾಲನೆ ನೀಡಿದೆಯಾದರೂ ಕೆಎಸ್‌ಆರ್‌ಟಿಸಿ ಹಲವಾರು ಸವಾಲುಗಳನ್ನು ಎದುರಿಸಲಿದೆ.
ವೋಲ್ವೋ ಸೇರಿದಂತೆ ಹಲವು ಮಾದರಿಯ ಬಸ್‌ಗಳನ್ನು ಸದ್ಯಕ್ಕೆ ಬಳಸಿಕೊಳ್ಳುವಂತಿಲ್ಲ. ಅಲ್ಲದೇ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ಇರಲಿದೆ. ದೂರದ ಊರುಗಳಿಗೆ ಆರಾಮವಾಗಿ ರಾತ್ರಿ ತೆರಳುವುದಕ್ಕೆ ಸದ್ಯಕ್ಕಂತೂ ಅವಕಾಶವಿಲ್ಲ. ಎರಡು ನಿಲ್ದಾಣಗಳ ನಡುವೆ ಮಾತ್ರ ಸಂಚಾರ ಇರುವುದರಿಂದ ಮಾರ್ಗದ ನಡುವಿನ ಊರುಗಳಿಗೆ ತೆರಳುವುದು ಕಠಿಣವಾಗಲಿದೆ.
ಅಂತರರಾಜ್ಯ ಬಸ್‌ ಸಂಚಾರಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ಹೀಗಾಗಿ ಆ ಬಸ್‌ಗಳು ಕೆಎಸ್‌ಆರ್‌ಟಿಸಿ ಬಳಿ ಹೆಚ್ಚುವರಿಯಾಗಿ ಉಳಿಯಲಿವೆ. ಇದೆಲ್ಲದರ ನಡುವೆ, ಬಸ್ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿರುವುದು ಮಾತ್ರ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.