ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಿ

ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಿ

ಜಗಳೂರಿನ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಎಸ್.ವಿ. ರಾಮಚಂದ್ರ ಕರೆ

ಜಗಳೂರು, ಮೇ 14- ಉದ್ಯೋಗ ಖಾತ್ರಿ ಯೋಜನೆಯಡಿ ಪಿಡಿಓಗಳು ಬರೀ ಕೆರೆ ಹೂಳೆತ್ತುವ ಕಾಮಗಾರಿ ಕಡೆ ಗಮನ ಹರಿಸದೇ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಲ್ಲಿ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು, ಜನರಿಗೆ ಕೆಲಸ ನೀಡಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ  ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬರ ಪರಿಸ್ಥಿತಿಯ ಕುರಿತು ನಿನ್ನೆ ನಡೆದ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ತಮ್ಮ ಹೊಲ ತೋಟದಲ್ಲಿ ಬದು ನಿರ್ಮಾಣ, ತೋಟಗಾರಿಕೆ  ಅಭಿವೃದ್ಧಿ ಮಾಡಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ನೀಡಲಾಗಿದೆ ಎಂದರು.
ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಖಾಸಗಿ ಬೋರ್ ಮೂಲಕ ಪಡೆಯಿರಿ, ಇಲ್ಲವೇ ಹೊಸ ಬೋರ್‌ವೆಲ್  ಕೊರೆಸಿ ನೀರು ಕೊಡಿ,  ಕೊರೊನಾ ಇರುವ ಹಿನ್ನೆಲೆಯಲ್ಲಿ  ಯಾವುದೇ ಕಾರಣಕ್ಕೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಡಿ  ಎಂದು ಅಧಿಕಾರಿಗಳಿಗೆ  ಶಾಸಕ ಎಸ್.ವಿ. ರಾಮಚಂದ್ರ ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ಒಂದೆರಡು ಬಾರಿ ಮಳೆಯಾಗಿದೆಯೇ ವಿನಃ ಉತ್ತಮ ಮಳೆಯಾಗಿಲ್ಲ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಿಲ್ಲ. ಹಾಗಾಗಿ ನೀರಿನ ಸಮಸ್ಯೆಯಾಗಬಹುದು. ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಬಳಕೆ ಮಾಡಿ ಇಲ್ಲದಿದ್ದರೆ ಹೊಸ ಬೋರ್‌ವೆಲ್  ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿ, ಯಾವುದೇ ಕಾರಣಕ್ಕೂ ಟ್ಯಾಂಕರ್ ಮೂಲಕ ನೀರು ಒದಗಿಸಬೇಡಿ ಎಂದರು.
ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಮಾಸಿಕ ವೇತನ ಜಮಾ ಆಗಿದೆಯೇ, ಇಲ್ಲವೇ ? ಎಂದು ಪರಿಶೀಲನೆ   ಮಾಡಬೇಕು. ಕೆಲವರಿಗೆ ಜಮಾ ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಾನು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದರ ಬಗ್ಗೆ ದೂರು ಕೇಳಿ ಬಂದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿಗೆ ಸಂಬಂಧಿಸಿದಂತೆ ಗೊಬ್ಬರ, ಬೀಜಗಳನ್ನು ದಾಸ್ತಾನು ಮಾಡಲಾಗಿದೆ, ಯಾವುದೇ ಕೊರತೆ  ಇಲ್ಲದಂತೆ ಮುಂಜಾಗ್ರತೆ ವಹಿಸಲಾಗಿದೆ,
ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲು ವಸತಿ ಶಾಲೆಗಳನ್ನು ಮತ್ತು ಲಾಡ್ಜ್‌ಗಳನ್ನು ತಾಲ್ಲೂಕು ಆಡಳಿತ ಸುಪರ್ದಿಗೆ ತೆಗೆದುಕೊಳ್ಳಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಬಾರದು. ಸರ್ಕಾರದ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಧಿಕಾರಿ ಮಲ್ಲಾನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೊರ ರಾಷ್ಟ್ರ, ರಾಜ್ಯ, ಜಿಲ್ಲೆಯಿಂದ ಬಂದಂತವರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಇದರ ಬಗ್ಗೆ ಮಾಹಿತಿ ನೀಡುವಂತೆ   ಟಾಂ ಟಾಂ ಹಾಕಿಸುವುದರ ಮೂಲಕ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಬೇಕು.  ಒಂದು ವೇಳೆ ನೀವು ಸರಿಯಾಗಿ ಮಾಹಿತಿ ನೀಡದೇ ಇದ್ದು ಪ್ರಕರಣಗಳು ಬೆಳಕಿಗೆ ಬಂದರೆ   ಪಿಡಿಓ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಸಿಪಿಐ ದುರುಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಬಣಕಾರ್, ಟಿಎಚ್‌ಓ ಡಾ. ನಾಗರಾಜ್, ಡಾ. ಮಲ್ಲಪ್ಪ  ಮುಂತಾದ ಇಲಾಖೆ ಅಧಿಕಾರಿಗಳು ಹಾಜರಿದ್ದರು.