ಅಧಿಕಾರಿಗಳು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ

ದಾವಣಗೆರೆ, ಮೇ 14- ಅಧಿಕಾರಿಗಳು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಅಸಮಾಧಾನ ಹೊರ ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳಿಂದ ಆಗುವ ತೊಂದರೆಗಳಿಗೆ ಪಾಲಿಕೆ ಹೊಣೆಯಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಜನರ  ಕಷ್ಟ ಅಲ್ಲಿನ ಸದಸ್ಯರಿಗೆ ತಿಳಿದಿರುತ್ತದೆ. ಅವರ ಕಷ್ಟ ಪರಿಹಾರ ಮಾಡಬೇಕಾದವರು ಅಲ್ಲಿನ ಸದಸ್ಯರು. ಆದರೆ ಸದಸ್ಯರಿಗೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದರು.
ನಾಲ್ಕನೇ ವಾರ್ಡ್‌ನ ಕಬೀರ್ ಎಂಬ ಸದಸ್ಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಹಿಂದೆ ಶಾಮನೂರು ಸದಸ್ಯರೊಬ್ಬರ ಪ್ರಕರಣ ಮಾಧ್ಯಮಗಳಲ್ಲಿ ಬರುವ ಹಾಗೆ ಮಾಡಿದ್ದರು. ಇದನ್ನು ಎಸ್ಪಿ ಅವರ ಬಳಿ ನಾವೆಲ್ಲಾ ಪ್ರಶ್ನಿಸಿದ್ದೆವು ಎಂದರು.

ಮೊನ್ನೆ ಛೇಂಬರ್ ಆಫ್ ಕಾಮರ್ಸ್ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿ ದ್ದಾರೆ. ಆದರೆ, ಪಾಲಿಕೆ ಅಧಿಕಾರಿ ಗಳಿಗಾ ಗಲೀ, ನಮಗಾಗಲೀ ವಿಷಯ ತಿಳಿಸಿಲ್ಲ.  ವ್ಯವಹಾರ ನಡೆಸಲು ಅವರು ಮಾಡಿದ ಮನವಿಗೆ ಸ್ಪಂದಿಸಿ, ಸಂಜೆ 7 ರವರೆಗೆ ವ್ಯವಹಾರಕ್ಕೆ ದಿಢೀರ್ ಅನುಮತಿ ನೀಡಿದ್ದಾರೆ. ಪಾಲಿಕೆಗೆ ಸ್ವಯಂ ಘೋಷಣೆ ಪತ್ರ ನೀಡಿ ವ್ಯವಹಾರ ಮಾಡಬಹುದೆಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಪಾಲಿಕೆಗೆ ತಿಳಿಸಿರಲಿಲ್ಲ ಎಂದರು.
ಸ್ಥಳೀಯ ಶಾಸಕ ರವೀಂದ್ರನಾಥ್ ಅವರಿಗೂ ಜಿಲ್ಲಾಧಿಕಾರಿ ಕಚೇರಿಯಿಂದ ಆಹ್ವಾನ ಇರಲಿಲ್ಲ. ಆದರೆ ಸಂಘದವರ ಕರೆ ಮೇರೆಗೆ ಶಾಸಕರು ಸಭೆಗೆ ತೆರಳಿದ್ದರು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಸಭೆ ನಡೆದರೂ ನನ್ನ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮುಂದೆ ಅವರು ತಿಳಿಸಲಿ ಬಿಡಲಿ, 45 ವಾರ್ಡ್‌ಗಳ ಜನತೆಯ ಆರೋಗ್ಯ, ಅವರಿಗೆ ಮೂಲ ಸೌಕರ್ಯ ನೀಡುವುದು ನಮ್ಮ ಕರ್ತವ್ಯ ಅದನ್ನು ಮಾಡುತ್ತೇವೆ. ಅಧಿಕಾರಿಗಳು ಸಹಕರಿಸಬೇಕು ಎಂದರು.