ನಗರದ ಸೀಲ್‌ಡೌನ್ ಪ್ರದೇಶದಲ್ಲಿ ಜನರ ಆಕ್ರೋಶ

ದಾವಣಗೆರೆ, ಮೇ.12- ಸೀಲ್‍ಡೌನ್ ಪ್ರದೇಶದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ, ನಗರ ಪಾಲಿಕೆ ಪೂರೈಸುತ್ತಿಲ್ಲವೆಂದು ಆರೋಪಿಸಿ ನಾಗರಿಕರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಷಾ ನಗರ, ಜಾಲಿನಗರ, ಇಮಾಂ ನಗರ, ಎಸ್‍ಪಿಎಸ್ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಶಿವನಗರ ಸೇರಿದಂತೆ ನಗರದ ಕಂಟೈನ್‍ಮೆಂಟ್ ಝೋನ್ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳು ಸರಬರಾಜಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿನಾಲಿ ಮಾಡಿ ಜೀವನ ಸಾಗಿಸುವವರೇ ಹೆಚ್ಚಿರುವ ಏರಿಯಾಗಳಲ್ಲಿ ಕಳೆದ 4 ದಿನಗಳಿಂದ ಹಾಲು, ತರಕಾರಿ, ಆಹಾರ ಸಾಮಗ್ರಿಗಳು ಪೂರೈಕೆಯಾಗುತ್ತಿಲ್ಲ. ಹೊರಗಡೆ ಸಂಚರಿಸಲು ಪೊಲೀಸರು ಬಿಡುತ್ತಿಲ್ಲ. ಅನಾರೋಗ್ಯದ ವೇಳೆ ಆಸ್ಪತ್ರೆಗೆ ತೆರಳಲು ಸಹ ಕಷ್ಟವಾಗಿದೆ. ಅನ್ನವಿಲ್ಲದೆ, ಅಗತ್ಯ ವಸ್ತುಗಳಿಲ್ಲದೇ ವಯೋವೃದ್ದರು ಹಾಗೂ ಮಕ್ಕಳು ಪರದಾಡುತ್ತಿದ್ದಾರೆ. ಚಿಕ್ಕ ಮಕ್ಕಳು ಹಾಲಿಲ್ಲದೇ ಹಸಿವಿನಿಂದ ನರಳುತ್ತಿವೆ. ಯಾವುದೇ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ನಮಗೆ ಅಗತ್ಯ ವಸ್ತುಗಳನ್ನು ನೀಡಿ ಇಲ್ಲವಾದರೆ ಲಾಕ್‍ಡೌನ್ ತೆರವು ಮಾಡಿ ದುಡಿಯಲು ಹೊರಗೆ ಬಿಡಬೇಕೆಂದು ತಮ್ಮ ಅಸಹಾಯಕತೆ ತೊಡಿಕೊಂಡಿದ್ದಾರೆ. ಇಲ್ಲಿರುವ ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ. ಸ್ಥಳೀಯ ಪಾಲಿಕೆ ಸದಸ್ಯರು ಕಿಟ್ ನೀಡುತ್ತಿಲ್ಲ. ಇಲ್ಲಿನ ಶಾಸಕರು ಹಾಗೂ ಸಂಸದರು ನಮ್ಮ ಕಷ್ಟ ಆಲಿಸಬೇಕು. ನಮಗೆ ನೆರವು ನೀಡಬೇಕು. ಜಿಲ್ಲಾಡಳಿತ ಈ ಕೂಡಲೇ ಅಗತ್ಯವಿರುವ ಆಹಾರ ಸಾಮಗ್ರಿಗಳ ವಿತರಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.