ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ವ ಪ್ರಯತ್ನ


ಸಾರ್ವಜನಿಕರ ಸಹಕಾರವೂ ಅಗತ್ಯ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್
ದಾವಣಗೆರೆ, ಮೇ 11- ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ರೋಗಿಗಳನ್ನು ಉಳಿಸಲು ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು,
ಜನರೂ ಕೂಡ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 526 ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲು ಅಗತ್ಯವಿರುವಷ್ಟು ತಯಾರಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ. ಒಂದು ತಿಂಗಳು ಜಿಲ್ಲೆಯಲ್ಲಿ ಯಾವುದೇ ಪ್ರಕರಣವಿಲ್ಲದೇ ಗ್ರೀನ್ ಝೋನ್‍ಗೆ ಬಂದಿದ್ದು, ಆ ಸಮಯದಲ್ಲೂ ಹಲವಾರು ತಯಾರಿ ನಡೆಸಲಾಗಿದ್ದು ಅದು ಈಗ ಉಪಯೋಗಕ್ಕೆ ಬರುತ್ತಿದೆ ಎಂದರು.

ನಗರದ ಎರಡು ಮೆಡಿಕಲ್ ಕಾಲೇಜುಗಳು, ಖಾಸಗಿ ಆಸ್ಪತ್ರೆ ತಜ್ಞ ವೈದ್ಯರು, ಜಿಲ್ಲಾಸ್ಪತ್ರೆ ತಜ್ಞ ವೈದ್ಯರು ಸೇರಿದಂತೆ ಎಲ್ಲ ವೈದ್ಯರ ಸಹಕಾರ ಉತ್ತಮವಾಗಿದೆ. ಜಾಲಿನಗರ, ಬಾಷಾನಗರ, ಇಮಾಮ್‌ ನಗರ, ಎಸ್‍ಪಿಎಸ್ ನಗರ, ಬೇತೂರು ರಸ್ತೆ, ಕೆಟಿಜೆ ನಗರ ಮತ್ತು ಶಿವನಗರ ಗಳಲ್ಲಿ ಒಟ್ಟು 7 ಕಡೆಗಳಲ್ಲಿ ಕಂಟೈನ್‍ಮೆಂಟ್ ಝೋನ್ ಮಾಡ ಲಾಗಿದ್ದು, ನಿಯಮಾನುಸಾರ ಸೀಲ್‍ಡೌನ್ ಮಾಡಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಹಾಗೂ ಈ ಪ್ರದೇಶ ಗಳಲ್ಲಿ ವ್ಯಾಪಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸೇರಿದಂತೆ ಕಂಟೈನ್‍ಮೆಂಟ್ ಝೋನ್‍ನಲ್ಲಿ ಬರುವ ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಿನಕ್ಕೆ 200 ಸ್ಯಾಂಪಲ್ ಕಳುಹಿಸುತ್ತಿದ್ದು ಇದನ್ನು 400 ರಿಂದ 500 ರವರೆಗೆ ಹೆಚ್ಚಿಸಲು ಸೂಚಿಸಿದ್ದೇನೆ. ತೀವ್ರ ಉಸಿರಾಟದ ತೊಂದರೆ ಮತ್ತು ಶೀತ, ಜ್ವರದಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಅಗತ್ಯ ವಸ್ತುಗಳನ್ನು  ಸಾಗಿಸುವ ಲಾರಿಗಳ ಡ್ರೈವರ್, ಕ್ಲೀನರ್‍ಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯದ ಪಡಿತರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಶೇ.90 ವಿತರಣೆಯಾಗಿದ್ದು ಇನ್ನುಳಿದ ಶೇ 10 ನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಹರಿಹರ ಮತ್ತು ಚನ್ನಗಿರಿಯ ಜನಸಂದಣಿ ಪ್ರದೇಶಗಳಲ್ಲಿ ರಾಂಡಮ್ ಆಗಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ಸೋಂಕಿನ ಮೂಲದ ಪತ್ತೆಗೆ ಸಂಬಂಧಿಸಿದಂತೆ ಉತ್ತರಿಸುತ್ತಾ, ವಿದೇಶ ಪ್ರಯಾಣದ ಹಿನ್ನೆಲೆಯಿಂದ ಹಾಗೂ ತಬ್ಲೀಗಿಗಳಿಂದ ಜಿಲ್ಲೆಯಲ್ಲಿ ಸೋಂಕು ಬಂದಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಓಡಾಟದ ಲಾರಿಗಳಲ್ಲಿ ಬಾಗಲಕೋಟೆ, ಹಾಸನ, ಕೂಡ್ಲಿಗಿ ಈ ಕಡೆಗಳಿಗೆ ಹೋಗಿ ಬಂದ ಹಿನ್ನೆಲೆ ಇರುವವರಿಂದ ಸೋಂಕು ತಗುಲಿದೆ ಎಂಬ ನಿಲುವಿಗೆ ಬರಲಾಗಿದೆ.
ಸಾಮಾನ್ಯವಾಗಿ ತಜ್ಞರು ಹೇಳುವಂತೆ ಕಂಟೈನ್‍ಮೆಂಟ್ ಝೋನ್‍ನ ದಟ್ಟಣೆ ಪ್ರದೇಶದಲ್ಲಿ ಪಾರ್ಷಿಯಲ್ ಏರ್ ಬೋರ್ನ್‍ನಿಂದ ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಇಲ್ಲಿಯೂ ಸೋಂಕು ಹರಡಿರಬಹುದು ಎಂದು ವಿವರಣೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿ ಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘ ವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.