ಸಿದ್ದೇಶ್ವರ ವಿರುದ್ಧ ಅವಹೇಳನಕಾರಿ ಮಾತು : ಕೃಷ್ಣಮೂರ್ತಿ ಖಂಡನೆ

ದಾವಣಗೆರೆ, ಮೇ 10- ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ಹಗುರವಾಗಿ ಹಾಗೂ ಅವಹೇಳನಕಾರಿಯಾಗಿ ಪಾಲಿಕೆ ಮಾಜಿ ಸದಸ್ಯ ದಿನೇಶ್‌ ಕೆ. ಶೆಟ್ಟಿ ಅವರು ಮಾತನಾಡುತ್ತಿದ್ದು, ಅವರ ವರ್ತನೆಯನ್ನು ಪಾಲಿಕೆಯ ಮಾಜಿ ಸದಸ್ಯ ಕೃಷ್ಣಮೂರ್ತಿ ಪವಾರ್‌ ಖಂಡಿಸಿದ್ದಾರೆ.

ದೇಶವು ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿದೆ. ಸರ್ವ ಪಕ್ಷಗಳ ಜನ ಪ್ರತಿನಿಧಿಗಳು ಪಕ್ಷ ಭೇದ ಮರೆತು ಬಡವರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ಕೆಲಸದಲ್ಲಿ ತೊಡಗಿದ್ದಾರೆ. ಸಂಸದರು ಬೀದಿಗಿಳಿದು ಬಡವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಅಂತಹವರ ಬಗ್ಗೆ ಹೀಯ್ಯಾಳಿಸುವುದು ಸರಿಯಲ್ಲ ಎಂದಿದ್ದಾರೆ.

ಸಂಸದರು ಸರ್ಕಾರದ ಕಿಟ್‌ಗಳನ್ನು ವಿತರಿಸಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡುತ್ತಿರುವ ದಿನೇಶ್‌ ಶೆಟ್ಟಿ ತಮ್ಮ ವಿವಿಧ ಏಜೆನ್ಸಿಗಳಿಂದ ಬಂದ ಹಣದಲ್ಲಿ ಕಿಟ್‌ಗಳನ್ನು ವಿತರಿಸಿ ಪ್ರಚಾರ ಪಡೆಯಲಿ ಎಂದು ಕೃಷ್ಣಮೂರ್ತಿ ಸವಾಲೆಸೆದಿದ್ದಾರೆ.