ಜಿಲ್ಲೆಯಲ್ಲಿ ಮೂರು ಕೋವಿಡ್ ಲ್ಯಾಬ್

ಜಿಲ್ಲೆಯಲ್ಲಿ ಮೂರು ಕೋವಿಡ್ ಲ್ಯಾಬ್

ದಾವಣಗೆರೆ, ಮೇ 9- ನಗರದ ಹೊರ ವಲಯದ ಎಸ್.ಎಸ್. ಆಸ್ಪತ್ರೆಯಲ್ಲಿನ ಪಿಸಿಆರ್ ಲ್ಯಾಬ್‍ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್  ಕೋವಿಡ್-19 ಪರೀಕ್ಷಾ ಲ್ಯಾಬ್‍ಗೆ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೋವಿಡ್ ಲ್ಯಾಬ್ ಬೇಕೆಂದು ಎಲ್ಲ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ನಮಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಾನು ಸಭೆ ಮಾಡಿದ್ದೆ. ಸರ್ಕಾರದ ವ್ಯವಸ್ಥೆ ಜೊತೆಗೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಲ್ಯಾಬ್ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೆ. ಈ ನಿಟ್ಟಿನಲ್ಲಿ ನಮ್ಮ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆಗೆ ಲ್ಯಾಬ್ ಸಜ್ಜುಗೊಳಿಸಿ ಇಂದು ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದರು.

ದಾವಣಗೆರೆ ಜನತೆ ಇನ್ನಾದರೂ ಸ್ವಲ್ಪ ಸಮಾಧಾನದಿಂದ ಇರಬಹುದಾಗಿದೆ. ಅನೇಕ ಪರೀಕ್ಷೆಗಳನ್ನು ಹೆಚ್ಚುವರಿಯಾಗಿ ಮಾಡಲು ಇದರಿಂದ ಸಾಧ್ಯವಾಗಲಿದೆ. ದಾವಣಗೆರೆ ಜಿಲ್ಲೆಗೆ ಮತ್ತೊಂದು
ಒಳ್ಳೆಯ ಸುದ್ದಿ ಎಂದರೆ ಇನ್ನೂ 2 ಲ್ಯಾಬ್ ಬರುತ್ತಿವೆ. ನಾಳೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಆರ್‍ಎನ್‍ಟಿಸಿಪಿ ಮಷೀನ್‍ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಹುಶಃ ಈ ವಾರದಲ್ಲಿಯೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡ ಲಿದ್ದಾರೆ. ಜೊತೆಗೆ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲೂ ಕೂಡ ಇನ್ನೊಂದು ಲ್ಯಾಬ್ ತೆರೆಯಲಾಗುತ್ತಿದ್ದು, ಒಟ್ಟು ಮೂರು ಲ್ಯಾಬ್ ಜಿಲ್ಲೆಗೆ ಒದಗಿಸಿದಂತಾಗುತ್ತದೆ ಎಂದರು.

ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ರಾದ ಶಾಮನೂರು ಶಿವಶಂಕರಪ್ಪ, ಮಾಡಾಳು ವಿರೂಪಾಕ್ಷಪ್ಪ, ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‍ಪಿ ಹನುಮಂತರಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.