ಕ್ವಾರಂಟೈನ್ ಶಂಕಿತರ ಸ್ಥಳಾಂತರ ಒತ್ತಾಯಕ್ಕೆ ಅಲ್ಪಸಂಖ್ಯಾತರ ವೇದಿಕೆ ಖಂಡನೆ

ದಾವಣಗೆರೆ, ಮೇ 9- ನಗರದಲ್ಲಿ ಈಗಾಗಲೇ ಕ್ವಾರಂಟೈನ್ ನಲ್ಲಿರುವ ಶಂಕಿತರನ್ನು ಜನನಿಬಿಡ ಪ್ರದೇಶದಿಂದ ಸ್ಥಳಾಂತರಿಸುವಂತೆ ಇತ್ತೀಚೆಗೆ ಬಿಜೆಪಿಯ ಕಾನೂನು ಸಂಸದೀಯ ಪ್ರಕೋಷ್ಟದವರು ಪತ್ರಿಕಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಅಬ್ದುಲ್ ಘನಿ ತಾಹೀರ್ ಖಂಡಿಸಿದ್ದಾರೆ.

ಕ್ವಾರಂಟೈನ್ ನಲ್ಲಿರುವ ಶಂಕಿತರು ಮೊದಲೇ ಮಾನಸಿಕವಾಗಿ ಕುಗ್ಗಿದ್ದು, ಅನಗತ್ಯವಾಗಿ ಅವರನ್ನು ಈ ರೀತಿ ಅಸ್ಪೃಶ್ಯ ನಡೆಗಳಿಂದ ಖಿನ್ನರಾಗುವಂತೆ  ಮಾಡಬಾರದು. ಇದರಿಂದ ಶಂಕಿತರ ಇಮ್ಯುನಿಟಿ ಪವರ್ ಕಡಿಮೆಯಾಗಿ ಹೆಚ್ಚಿನ ಅನಾರೋಗ್ಯಕ್ಕೆ ದಾರಿಯಾಗಲಿದೆ. ಆದ್ದರಿಂದ ಜಿಲ್ಲಾಡಳಿತ ಇಂತಹ ರಾಜಕೀಯ ಪ್ರೇರಿತ ಬೇಡಿಕೆಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ಈ ಹಿಂದೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮಗಳು ಮತ್ತು ಅಳಿಯ ಇಬ್ಬರನ್ನು ನಗರದಲ್ಲಿ ಕ್ವಾರಂಟೈನ್ ಮಾಡಿದಾಗ ಚಕಾರ ಎತ್ತದ ಬಿಜೆಪಿಯ ಕೆಲವರು ಇದೀಗ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿ ದ್ದಾರೆ. ಜಿಲ್ಲಾಡಳಿತವು ಇಂತಹ ಯಾವುದೇ ರಾಜಕೀಯ ಪ್ರೇರಿತ ಬೇಡಿಕೆಗಳಿಗೆ ಸ್ಪಂದಿಸದೇ ತಮ್ಮ ಕೆಲಸ ಮುಂದುವರೆಸಲಿ ಎಂದಿದ್ದಾರೆ. 

ಅಸಂಘಟಿತ ಕಾರ್ಮಿಕರ ಪರಿಹಾರಕ್ಕೆ ಒತ್ತಾಯ: ರಾಜ್ಯ ಸರ್ಕಾರವು ಈಗಾಗಲೇ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕ್ಷೌರಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ನೇಕಾರರಿಗೆ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಇದೇ ರೀತಿ ಕಳೆದ ಒಂದೂವರೆ ತಿಂಗಳಿಂದ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅವಲಕ್ಕಿ, ಮಂಡಕ್ಕಿ ಭಟ್ಟಿ, ಪಾದರಕ್ಷೆ ಅಂಗಡಿಯ ಕಾರ್ಮಿಕರುಗಳಿಗೂ ಪರಿಹಾರ ಘೋಷಣೆ ಮಾಡಬೇಕು ಎಂದು ಅಬ್ದುಲ್ ಘನಿ ತಾಹೀರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈಗಾಗಲೇ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ನೀಡುತ್ತಿದ್ದು, ಕಾರ್ಮಿಕರ ಕಾರ್ಡ್ ನವೀಕರಣ ಮಾಡಿಸದವರಿಗೆ ಪರಿಹಾರ ಧನ ತಡೆ ಹಿಡಿಯಲಾಗಿದೆ. ಸಂಕಷ್ಟದಲ್ಲಿದಲ್ಲಿರುವ ಕಾರ್ಡ್ ಹೊಂದಿರುವ ಕಾರ್ಮಿಕರು ನವೀಕರಣ ಮಾಡಿಸದಿದ್ದರೂ ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಅವರು ಆಗ್ರಹಿಸಿದ್ದಾರೆ.