ಕೊರೊನಾ ಬಗ್ಗೆ ಫೇಸ್ ಬುಕ್‌ನಲ್ಲಿ ಭಯ ಹುಟ್ಟಿಸುವ ಫೋಸ್ಟ್

ದಾವಣಗೆರೆ, ಮೇ 5- ಕೊರೊನಾ ಸೋಂಕು ಬಗ್ಗೆ ಜಿಲ್ಲೆಯ ಜನರನ್ನು ಭಯಗೊಳಿಸುವ ಅಂಶಗಳುಳ್ಳ ಪೋಸ್ಟ್ ಗಳನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡ ಆರೋಪದಡಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಿವಪ್ರಸಾದ್ ಕುರುಡಿಮಠ್ ಎಂಬಾತ ಇದೇ ದಿನಾಂಕ 1ರಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಜಾಲಿನಗರದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲಾಗಿದೆ. ಆಜಾದ್ ನಗರ, ಬಾಷಾನಗರ, ಜಾಲಿನಗರ, ಭಗತ್ ಸಿಂಗ್ ನಗರ, ವಿನೋಬನಗರ ಇವೆಲ್ಲವೂ ಜಿಹಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಡಾವಣೆಗಳು. ಎಚ್ಚರ ಹಿಂದೂ ಬಾಂಧವರೆ ಎಂಬುದಾಗಿ ಫೋಸ್ಟ್ ಮಾಡಲಾಗಿತ್ತು.
ಅಲ್ಲದೆ, ದಾವಣಗೆರೆಯ ಬಾಷಾನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಮುಸಲ್ಮಾನರು ಇದ್ದಾರೆ. ಬರೆದಿಟ್ಟುಕೊಳ್ಳಿ ಸ್ಮಶಾನವಾಗಲಿದೆ ದಾವಣಗೆರೆ ಎಂಬುದಾಗಿ ಸುಳ್ಳು ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರನ್ನು ಭಯಗೊಳಿಸುವ ಅಂಶಗಳನ್ನೊಳ ಗೊಂಡಂತೆ ಪೋಸ್ಟ್‍ಗಳನ್ನು ತನ್ನ ಖಾತೆಯಲ್ಲಿ ಹಾಕಿಕೊಂಡಿದ್ದ.
ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 54 ರನ್ವಯ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.
ಈ ರೀತಿ ತಪ್ಪು ಪೋಸ್ಟ್ ಗಳನ್ನು ಹಾಕದಂತೆ ತಾಲ್ಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದು, ಆಪಾದಿತನು ಮತ್ತೊಮ್ಮೆ ಈ ರೀತಿ ಅಪರಾಧದಲ್ಲಿ ಭಾಗಿಯಾಗುವುದಿಲ್ಲ. ಸದ್ವರ್ತನೆಯಿಂದ ಇರುವುದಾಗಿ 5 ಲಕ್ಷ ರೂ.ಗಳ ಮುಚ್ಚಳಿಕೆ ಬಾಂಡನ್ನು ಬರೆದುಕೊಟ್ಟಿದ್ದಾನೆ.
ಪೊಲೀಸ್ ಇಲಾಖೆಯಿಂದ ಕಣ್ಗಾವಲನ್ನು ಹೆಚ್ಚಿಸಿದ್ದು, ಈ ರೀತಿಯ ಪೋಸ್ಟ್ ಗಳನ್ನು ಹಾಕುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.