ಹೀಗೇಕೆ ದೇವ…!

ಹೀಗೇಕೆ ದೇವ…!

ನೀ ತಂದ ಸೃಷ್ಟಿಗೆ ಚೆಲುವಿತ್ತೆ ಒಲವಿತ್ತೆ
ಕಂಡು ಕರುಬುವ ಅಸೂಯೆಯನು ಜೊತೆಗಿತ್ತೆ
ಪ್ರೀತಿಯುಣಿಸುತಲೆ ಕಡಿದಾಡೊ ಬಗೆಯಿತ್ತೆ
ಬದುಕಿತ್ತೆ ನೋವಿತ್ತೆ ನರಳಾಟದಂತ್ಯಕ್ಕೆ
ಸಾವಿನ ಕೊನೆಯಿತ್ತೆ ಹೀಗೇಕೆ ದೇವ
ಹೀಗೇಕೆ ನಿನ್ನಯ ಲೀಲೆ ಕಾಡೆಲ್ಲ ಬರಿದಾಯ್ತು
ಜಲವೆಲ್ಲ ಬತ್ತೋಯ್ತು ಮಣ್ಣೆಲ್ಲ ಹುಡಿಯಾಯ್ತು
ಬಾಂಧವ್ಯ ದೂರಾಯ್ತು ಮನುಜನ ದಾಹಕೆ
ಮಿತಿಯು ಇಲ್ಲವಾಯ್ತು ಹೀಗೇಕೆ ದೇವ
ಹೀಗೇಕೆ ನಿನ್ನಯ ಲೀಲೆ ಕೊಟ್ಟ ನೀನೇ
ಎಲ್ಲವನೂ ಕಸಿದೆ ಹುಟ್ಟಿಸಿದ ನೀನೆ
ಹುಲ್ಲಿಗೂ ಬರತಂದೆ ಮನುಜನ ಎದೆತುಂಬ
ವಿಷವನೂ ತುಂಬಿದೆ ಹೀಗೇಕೆ ದೇವ
ನಿನ್ನಯ ಲೀಲೆ ನೀಡು ನೀ ಜಗಕೆಲ್ಲ
ಮತ್ತೆ ಆ ಚೈತ್ರವನು ಉಳಿಸು ನೀ ಸೃಷ್ಟಿಯನು
ಅಳಿಸು ಮನುಜನೆದೆಯ ಸ್ವಾರ್ಥವನು
ಬುವಿ ಉಳಿಯಲು ಹರಸು ಜಗವನು
ಹಸಿರಾಗಲು…

                             – ಎ ಸಿ ಶಶಿಕಲಾ ಶಂಕರಮೂರ್ತಿ, ಶಿಕ್ಷಕಿ ಸಾಹಿತಿ ದಾವಣಗೆರೆ.