ಹಳ್ಳಿಗಳಲ್ಲಿ ಕೊರೊನಾ ಬರದಂತೆ ಶ್ರಮಿಸುತ್ತಿರುವ ಕಾರ್ಯಪಡೆ

ಹಳ್ಳಿಗಳಲ್ಲಿ ಕೊರೊನಾ ಬರದಂತೆ ಶ್ರಮಿಸುತ್ತಿರುವ ಕಾರ್ಯಪಡೆ

ಮಲೇಬೆನ್ನೂರು, ಮಾ. 31- ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ನಗರ-ಪಟ್ಟಣಗಳಲ್ಲಿ ಅಷ್ಟೇ ಅಲ್ಲ, ಹಳ್ಳಿಗಳಲ್ಲೂ ಮತ್ತಷ್ಟು ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಗ್ರಾ.ಪಂ. ಮತ್ತು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ.

21 ದಿವಸದ ಸಂಪೂರ್ಣ ಲಾಕ್ ಡೌನ್ ಯಶಸ್ವಿಗೊಳಿಸಲು ನಗರ ಪಟ್ಟಣಗಳಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಯವರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅದೇ ರೀತಿ ಹಳ್ಳಿಗಳಲ್ಲೂ ಗ್ರಾಮ ಪಂಚಾ ಯ್ತಿಯ ಪಿಡಿಓ ಕಾರ್ಯದರ್ಶಿ ಹಾಗೂ ಸಿಬ್ಬಂ ದಿಯವರು ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ದೊಂದಿಗೆ ಹಳ್ಳಿಗಳಲ್ಲಿ ಸುತ್ತಾಡಿ ಜನರು ಅನಾವಶ್ಯಕವಾಗಿ ಹೊರಬರದಂತೆ ನೋಡಿಕೊಳ್ಳುತ್ತಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಹೋಗುವ ವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಇವರೆಲ್ಲರೂ ಮಾಡುತ್ತಿದ್ದಾರೆಂದರೆ ತಪ್ಪಾಗಲಾರದು.

ಬೆಳಿಗ್ಗೆ ಮತ್ತು ಸಂಜೆ ಹೊತ್ತು ಕಿರಾಣಿ ಗಳನ್ನು ಓಪನ್ ಮಾಡಿಸಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ ತರಕಾರಿಗಳನ್ನು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಜನರ ಮನೆ ಬಾಗಿಲಿಗೆ ಹೋಗುವ ವ್ಯವಸ್ಥೆ ಕಲ್ಪಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ಹೇಳುತ್ತಿದ್ದಾರೆ. ಇವರ ಈ ಎಲ್ಲಾ ಕೆಲಸಗಳಿಗೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಸಾಥ್ ನೀಡುತ್ತಿದ್ದು, ಬೇರೆ ಊರುಗಳಿಂದ ಬರುವ ಅಧಿಕಾರಿಗಳಿಗೆ ಊಟ ನೀಡುವುದರ ಜೊತೆಗೆ ನೈತಿಕ ಬೆಂಬಲವನ್ನೂ ಕೊಟ್ಟಿದ್ದಾರೆ.

ಕಾರ್ಯಪಡೆ ರಚನೆ : ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಬೀಟ್ ಪೊಲೀಸ್, ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಿದೆ.

ಜನರು ಗುಂಪು ಸೇರದಂತೆ ಸಾಮಾಜಿಕ ಅಂತಕ ಕಾಪಾಡುವುದಕ್ಕೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ, ದಿನ ಬಿಟ್ಟು ದಿನ ಫಾಗಿಂಗ್, ಬ್ಲೀಚಿಂಗ್ ಪೌಡರ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಅಂತರ್ ಜಿಲ್ಲೆಗಳಿಂದ ಹಳ್ಳಿಗಳಿಗೆ ಬಂದಿರುವ ಮತ್ತು ಬರುತ್ತಿರುವವರ ಬಗ್ಗೆ ನಿಗಾ ವಹಿಸಿದ್ದು, ಅವರ ಆರೋಗ್ಯ ತಪಾಸಣೆ ಮಾಡಿಸಿ, 14 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ನಗರ ಗಳ ಮಾದರಿ ಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇರಲು ಸೂಚನೆ ನೀಡಿದ್ದಾರೆ. ಅಲ್ಲದೇ ಹೊರಗಿನಿಂದ ಹಳ್ಳಿಗಳಿಗೆ ಬಂದಿರುವವರ ಸಂಪೂರ್ಣ ಮಾಹಿತಿಯನ್ನು ಈ ಕಾರ್ಯಪಡೆ ಕಲೆ ಹಾಕಿದೆ. ಪ್ರತಿದಿನ ಧ್ವನಿವರ್ದಕದ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ಮಾಡಲಾಗುತ್ತಿದೆ.

ಅನುದಾನ ಬಳಸಲು ಅವಕಾಶ : ಕೋವಿಡ್ -19 ನಿಯಂತ್ರಿಸುವುದಕ್ಕಾಗಿ ಗ್ರಾ.ಪಂ.ನ 14ನೇ ಹಣಕಾಸು ಅಥವಾ ವರ್ಗ -01ರ ಅನುದಾನದಲ್ಲಿ ಸ್ವಚ್ಛತೆ ಹಾಗೂ ಇನ್ನಿತರೆ ನಿರ್ವ ಹಣೆಗೆ ಹಣ ಬಳಸುವಂತೆ ಜಿ.ಪಂ. ಸುತ್ತೋಲೆ ಹೊರಡಿಸಿದ್ದು, ಸ್ವಚ್ಛತೆಗೆ ಬೇಕಾದ ಫಾಗಿಂಗ್, ಬ್ಲೀಚಿಂಗ್ ಪೌಡರ್, ಮಾಸ್ಕ್, ಸ್ಯಾನಿಟೈಸರ್, ಕೈ-ಕಾಲುಗಳಿಗೆ ರಕ್ಷಣಾ ಕವಚ, ಹ್ಯಾಂಡ್ ವಾಷ್ ಲಿಕ್ವಿಡ್, ಸೋಪು ಖರೀದಿಸಬಹುದೆಂದು ಜಿಗಳಿ ಗ್ರಾ.ಪಂ. ಪಿಡಿಓ ದಾಸರ ರವಿ `ಜನತಾವಾಣಿ’ಗೆ ಮಾಹಿತಿ ನೀಡಿದರು.