ಬೇಜವಾಬ್ದಾರಿತನ ಸಲ್ಲದು: ಸಿರಿಗೆರೆ ಶ್ರೀ

ಬೇಜವಾಬ್ದಾರಿತನ ಸಲ್ಲದು: ಸಿರಿಗೆರೆ ಶ್ರೀ

ಸಿರಿಗೆರೆ, ಏ. 5- ಮನೆಯಲ್ಲಿಯೇ ಇದ್ದು ಮನೆಯ ದೀಪ ಬೆಳಗಿಸಿರಿ. ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದೀರಿ. ರಾತ್ರಿ ದೀಪ ಬೆಳಗಿಸಿ ಬೆಳಗಾದೊಡನೆ ಅಡ್ಡಾದಿಡ್ಡಿ ತಿರುಗಾಡುವ ಪಾಪ ಕೃತ್ಯವನ್ನು ಮಾಡಬೇಡಿ ಎಂದು ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಭಕ್ತರಿಗೆ ತಿಳಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಕರೆಯಂತೆ ಬೃಹನ್ಮಠದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು,  ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಗಿರುವಷ್ಟು ಅನಾಹುತ, ನಮ್ಮ ದೇಶದಲ್ಲಿ ಆಗಿಲ್ಲ. ನನಗೆ ಏನೂ ಆಗುವುದಿಲ್ಲವೆಂಬ ಒಣ ಜಂಬ ಬೇಡ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಗಳನ್ನು ಚಾಚೂ ತಪ್ಪದೇ ಪಾಲಿಸಿರಿ. ಎಲ್ಲವನ್ನೂ ಸರಕಾರ ಮಾಡಲು ಆಗುವುದಿಲ್ಲ.  ಸ್ವಯಂ ನಿಯಂತ್ರಣ ಅತ್ಯವಶ್ಯಕ ಎಂದು ಹೇಳಿದರು.

ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಾಣು ಮನುಕುಲವನ್ನು ನಾಶ ಗೊಳಿಸುವ ಮಹಾ ಮಾರಿಯಾಗಿದೆ. ದೂರ ದರ್ಶನಗಳಲ್ಲಿ ಲಕ್ಷಾಂತರ ಜನರು ಸಾವು-ನೋವಿಗೆ ಒಳಗಾಗುತ್ತಿರುವ ದೃಶ್ಯವನ್ನು ನೋಡಿಯೂ ನಮ್ಮ ಜನರು ಎಚ್ಚೆತ್ತು ಕೊಳ್ಳದೆ ಅಡ್ಡಾದಿಡ್ಡಿ ತಿರುಗಾಡುತ್ತಿರುವುದು ತುಂಬಾ ವಿಷಾದನೀಯ ಸಂಗತಿ. ಇದು ಅಕ್ಷಮ್ಯ ಅಪರಾಧ. ಹೀಗೆ ಓಡಾಡುತ್ತಿರುವವರು  ನಿಮ್ಮ ಕುಟುಂಬದ ಸದಸ್ಯರಿಗೂ ಮತ್ತು ನಿಮ್ಮ ನೆರೆಹೊರೆಯವರಿಗೂ ನೀವೇ ಮಹಾಮಾರಿಯಾಗುತ್ತೀರೆಂಬುದನ್ನು  ಮರೆಯದಿರಿ.  ರಾತ್ರಿ ಕಂಡ ಬಾವಿ ಯಲ್ಲಿ ಹಗಲು ಹೊತ್ತು ಬೀಳಬಹುದೇ ? ಯೋಚಿಸಿರಿ ಎಂದು ಎಚ್ಚರಿಸಿದರು. ಪೇಟೆ, ಪಟ್ಟಣಗಳಲ್ಲಿ ಆಗುತ್ತಿರುವ ಸಾವು-ನೋವು ಸುದೈವದಿಂದ ಹಳ್ಳಿಗಳಿಗೆ ವ್ಯಾಪಿಸಿಲ್ಲ. ನಿಮ್ಮ ಬೇಜವಾಬ್ದಾರಿ ವರ್ತನೆಯಿಂದ ಈ ಸೋಂಕು ಹಳ್ಳಿಗಳಿಗೆ, ಏನಾದರೂ ಹರಡಿದರೆ ಇಡೀ ಊರಿಗೆ ಊರೇ ಸ್ಮಶಾನವಾಗುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು  ಭಕ್ತರನ್ನುದ್ದೇಶಿಸಿ ಹೇಳಿದ್ದಾರೆ.