ಗ್ಲೋಬಲ್ ಬಸವಜಯಂತಿ

ಗ್ಲೋಬಲ್ ಬಸವಜಯಂತಿ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515, ಹೊಸದುರ್ಗ-ತಾ
9448395594, swamiji.ps@gmail.com

ನಮಗೆ ಅರಿವು ಮೂಡಿದನಂತರ ನಾವು ಅತ್ಯಂತ ಸಂತೋಷ, ಸಂತೃಪ್ತಿಯಿಂದ `ಬಸವಜಯಂತಿ’ಯನ್ನು ಅನುಭವಿಸಿ, ಆಚರಿಸುತ್ತ ಬಂದಿದ್ದೇವೆ. ಆದರೆ 2020 ಎಪ್ರಿಲ್ 26ರಂದು ಆಚರಿಸಿದ ಬಸವಜಯಂತಿಗೆ ವಿಶೇಷವಾದ ಮೆರಗು, ಬೆರಗು, ಬೆಡಗು ಇತ್ತು. ಏನು ಇದರ ವಿಶೇಷ ಎನ್ನುವ ಪ್ರಶ್ನೆ ಸಹೃದಯಿ ಓದುಗರಿಗೆ ಬರಬಹುದು. ಖಂಡಿತ ವಿಶೇಷ ಇದೆ. ನಮಗೆ ಬಸವಣ್ಣನವರ ಬಗ್ಗೆ ನಿಜವಾದ ಪರಿಚಯ ಮಾಡಿಕೊಟ್ಟವರು ನಮ್ಮ ಪರಮಾರಾಧ್ಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ನಾವು ಗ್ರಾಮೀಣ ಪ್ರದೇಶದಿಂದ ಬಂದವರು. ಇಂದಿಗೂ ಕೆಲವು ಗ್ರಾಮಗಳಲ್ಲಿ ಎತ್ತಿನ ಮೆರವಣಿಗೆ ಮೂಲಕ `ಬಸವಜಯಂತಿ’ ಆಚರಿಸುವಂತೆ ನಾವೂ ಆಚರಿಸಿದವರೇ. ಸಿರಿಗೆರೆಗೆ ಪಿಯುಸಿ ಓದಲು ಬಂದಾಗ ನಮಗೆ ಬಸವಣ್ಣನವರ ತತ್ವಗಳ ಬಗ್ಗೆ ಅರಿವು ಮೂಡಲಾರಂಭಿಸಿತು. ಆಗ ನಮ್ಮ ಗುರುಗಳ `ಶತಮಾನೋತ್ಸವ ಸಂದೇಶ’ ಎನ್ನುವ ಲಿಂಗಾಯತ ತತ್ವ ಬಿಂಬಿಸುವ ಕೃತಿ ನಮ್ಮ ಗಮನ ಸೆಳೆಯಿತು. ಅಲ್ಲಿಂದ ನಮ್ಮ ಬದುಕಿನ ದಿಕ್ಕೇ ಬದಲಾಯಿತು. ಮುಂದೆ ಬಸವಜಯಂತಿ ಎಂದರೆ ಎತ್ತುಗಳ ಮೆರವಣಿಗೆ ಅಲ್ಲ; ಬಸವಣ್ಣ ಒಬ್ಬ ಮನುಷ್ಯ. ಮನುಷ್ಯರ ಉದ್ಧಾರಕ್ಕಾಗಿಯೇ ದುಡಿದು, ಮಡಿದ ಯುಗಪುರುಷ, ಧರ್ಮ ಸಂಸ್ಥಾಪಕ, ಧರ್ಮ ಗುರು ಎನ್ನುವ ವಾಸ್ತವ ಸತ್ಯ ಮನವರಿಕೆ ಆಗುತ್ತ ಬಂತು.

`ಕೊರೊನಾ’ ಎನ್ನುವ ಕಣ್ಣಿಗೆ ಕಾಣದ, ಯಾವುದೆ ಪಾಸ್‍ಪೋರ್ಟ್, ವೀಸಾ ಇಲ್ಲದೆ ಎಲ್ಲಿ ಬೇಕಾದರೂ ಜಾಂಡಾ ಊರಿ ಮನುಕುಲವನ್ನು ಸರ್ವನಾಶ ಮಾಡುವೆ ಎಂದು ಹಠ ತೊಟ್ಟಿರುವ ವೈರಸ್ ವಿರುದ್ಧ ಆಧುನಿಕ ಮಾರಕಾಸ್ತ್ರಗಳನ್ನೂ ಬಳಸದೆ ಯುದ್ಧ ವಿಶ್ವದಾದ್ಯಂತ ನಡೆಯುತ್ತಿದೆ. ಅದರಂತೆ ಮಾರ್ಚ್ 22 ರಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಮೂಲಕ ಯುದ್ಧ ನಡೆದಿದೆ. ಮನುಕುಲದ ಉದ್ಧಾರದ ಗುತ್ತಿಗೆ ಹಿಡಿದಿದ್ದ ಶಾಸ್ತ್ರಿಗಳು, ಬಾಬಾಗಳು, ಪವಾಡಪುರುಷರು, ಜ್ಯೋತಿಷಿಗಳು ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ಮೂಲೆಗುಂಪಾಗಿದ್ದಾರೆ. ಅವರ ಮೂಲಕವೇ ತಮ್ಮ ಅಸ್ತಿತ್ವ ಕಾಯ್ದುಕೊಂಡಿದ್ದ ಸಣ್ಣ, ದೊಡ್ಡ, ಅತೀ ದೊಡ್ಡ ದೇವ ಮಂದಿರಗಳು, ಚರ್ಚ್‍ಗಳು, ಮಸೀದಿಗಳು, ಗುರುದ್ವಾರಗಳು ಬಾಗಿಲು ಮುಚ್ಚಿಕೊಂಡಿವೆ. ಆದರೂ ಜನರಲ್ಲಿ `ದೈವಭಕ್ತಿ’ಯಿಂದ ಕೊರೊನಾ ಮಾರಿಯನ್ನು ಒದ್ದೋಡಿಸುತ್ತೇವೆ ಎನ್ನುವ ಮೌಢ್ಯ ಮರೆಯಾಗಿಲ್ಲ. ಅದು ಕಾರಣವೇ `ಕೊರೊನಾ ಅಮ್ಮ’ನನ್ನು ಪೂಜಿಸಿ, ಹೋಳಿಗೆ ಎಡೆಮಾಡಿ ಕಳಿಸುವ ಹಬ್ಬ ಕೆಲವು ಗ್ರಾಮಗಳಲ್ಲಿ ನಡೆಯುತ್ತಿವೆ.

ಈ ಕೊರೊನಾ ಕಾರಣದಿಂದಾಗಿ ಎಲ್ಲ ಹಬ್ಬ, ಮದುವೆ, ಉತ್ಸವ ಹೀಗೆ ಇನ್ನೇನೇನೋ ಅದ್ದೂರಿ ಕಾರ್ಯಕ್ರಮಗಳು ನಿಂತುಹೋಗಿವೆ. ಈ ಪಟ್ಟಿಗೆ `ಬಸವಜಯಂತಿ’ಯೂ ಸೇರುವಂತಾಯ್ತಲ್ಲ ಎನ್ನುವ ಕೊರಗು ಕೆಲವರಿಗಾದರೂ ಇದ್ದಿರಬಹುದು. ಆದರೆ ನಮಗೆ ಖಂಡಿತ ಆ ಕೊರಗಿರಲಿಲ್ಲ. ನಿಜವಾದ ಬಸವಜಯಂತಿಯನ್ನು ಆಚರಿಸುವುದು ಹೇಗೆಂದು ತಿಳಿಸಲು ಕೊರೊನಾ ಬರಬೇಕಾಯ್ತಲ್ಲ ಎನ್ನುವ ವಿಷಾದವಿತ್ತು.

ಅಮೆರಿಕೆಯಲ್ಲಿರುವ ಬಸವಾಭಿಮಾನಿಗಳು ಪ್ರತಿವರ್ಷ ಕರ್ನಾಟಕದಿಂದ ಹಲವಾರು ಧಾರ್ಮಿಕ, ರಾಜಕೀಯ, ಸಾಹಿತ್ಯಕ ವಲಯದ ಪ್ರಮುಖರನ್ನು ಕರೆಸಿಕೊಂಡು ಅಲ್ಲಿ `ಬಸವಜಯಂತಿ’ಯನ್ನು ಆಚರಿಸುತ್ತಿದ್ದರು. ಈ ವರ್ಷ ಅಲ್ಲಿನ `ವಿ ಎಸ್ ಎನ್ ಎ’ ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಹಾದಿಮನಿ ಹಾಗೂ ಕರ್ನಾಟಕದ `ಬಸವಸಮಿತಿ’ಯ ಅಧ್ಯಕ್ಷ ಅರವಿಂದ ಜತ್ತಿಯವರ ಸಂಯುಕ್ತಾಶ್ರಯದಲ್ಲಿ `ಗ್ಲೋಬಲ್ ಬಸವ ಫೌಂಡೇಶನ್’ ಮೂಲಕ ವಿಶ್ವಮಟ್ಟದಲ್ಲಿ ಬಸವಜಯಂತಿಯ ಅಚರಣೆಯನ್ನು ವ್ಯವಸ್ಥೆ ಮಾಡಿದ್ದರು. ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ನಮ್ಮನ್ನೂ ಒಳಗೊಂಡಂತೆ ಹಲವಾರು ಮಠಾಧೀಶರು, ವಚನ ಸಂಗೀತ ಕಲಾವಿದರು, ಬಸವಾನುಯಾಯಿಗಳು ಭಾಗವಹಿಸಿದ್ದರು. 26ರ ಸಂಜೆ ಏಳು ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 10-30ಕ್ಕೆ ಮುಗಿದು ಎಲ್ಲರಿಗೂ ಸಂತೃಪ್ತಿಯನ್ನು ತಂದುಕೊಟ್ಟಿತು. ಹಾಗಂತ ನಾವೆಲ್ಲರೂ ದೈಹಿಕವಾಗಿ ಅಮೆರಿಕೆಗೆ ಹೋಗಿದ್ದೆವೆಂದಲ್ಲ. ಇವತ್ತು ತಂತ್ರಜ್ಞಾನ ತುಂಬಾ ಪ್ರಭಾವಿಯಾಗಿದೆ. `ಝೂಮ್ ಆಪ್’ ತಂತ್ರಜ್ಞಾನದ ಬಳಕೆಯಿಂದ ನಾವಿದ್ದಲ್ಲಿಂದಲೇ ಆ ಕಾರ್ಯಕ್ರಮ ನೋಡಲು ಮತ್ತು ಮಾತನಾಡಲು, ಮಾತು ಕೇಳಿಸಿಕೊಳ್ಳಲು ಸಾಧ್ಯವಾಯಿತು. ಯಾರ ಮಾತುಗಳಲ್ಲೂ ಅತಿಶಯೋಕ್ತಿ ಇರಲಿಲ್ಲ; ಮೌಢ್ಯ ಸಾರುವ ವಿಚಾರಗಳಿರಲಿಲ್ಲ. ಬಸವಣ್ಣನವರ ನೈಜ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಪ್ರತಿಯೊಬ್ಬರ ಮಾತುಗಳೂ ಕನ್ನಡಿಯಾಗಿದ್ದವು.

27ರ ಬೆಳಗ್ಗೆ ಕೆಲವರು ನಮಗೆ ವಾಟ್ಸಪ್ ಮತ್ತು ಫೋನ್‌ ಮೂಲಕ `ಎತ್ತುಗಳ ಪೂಜೆ’ ಮಾಡುವ ಮಹಾನುಭಾವರ ಚಿತ್ರಗಳನ್ನು ಕಳಿಸಿ ಇದು ಬಸವಜಯಂತಿಯೇ ಎಂದು ಕೇಳುತ್ತಿದ್ದರು. `ತತ್ವ ಗೊತ್ತಿಲ್ಲದ ಜನರಿಗೆ ಏನೇ ಹೇಳಿದರೂ ಬೋರ್ಗಲ್ಲ ಮೇಲೆ ಮಳೆ ಸುರಿದಂತೆ’ ಎಂದು ವಾಟ್ಸಪ್ ಸಂದೇಶ ಕಳಿಸಿ ಸಮಾಧಾನ ಮಾಡಲು ಪ್ರಯತ್ನಿಸಿದೆವು. ಅದಕ್ಕವರು ಟಿವಿಯಲ್ಲಿ ಖಂಡಿಸಬಹುದು, ಪತ್ರಿಕಾ ಹೇಳಿಕೆ ನೀಡಬಹುದು ಎಂದು ಪ್ರತಿಕ್ರಿಯಿಸಿದರು. ಮತ್ತೊಬ್ಬ ಬಸವಭಕ್ತರು ಜಗದ್ಗುರುಗಳೊಬ್ಬರ ಪತ್ರಿಕಾ ಹೇಳಿಕೆಯ ಪ್ರತಿಯನ್ನು ಕಳಿಸಿ `ಸುಳ್ಳನ್ನೇ ಸತ್ಯವೆಂದು ವಾದಿಸುವ ಮಹಾನ್ ಸ್ವಾಮಿಗಳು’ ಎಂದು ಶಿರೋನಾಮೆ ಕೊಟ್ಟಿದ್ದರು. ಅವುಗಳನ್ನು ನೋಡಿದಾಗ ಥಟ್ಟನೆ ನಮಗೆ ನೆನಪಾದದ್ದು ನಮ್ಮ ಗುರುಗಳ `ಶತಮಾನೋತ್ಸವ ಸಂದೇಶ’ ಕೃತಿ. ಅದು ಪ್ರಥಮ ಮುದ್ರಣ ಕಂಡಿರುವುದು 1967ರಲ್ಲಿ. ಆ ಕೃತಿಯ ಮೊದಲ ಲೇಖನವೇ `ಬಸವಣ್ಣ ಎತ್ತಲ್ಲ’ ಎನ್ನುವುದು. ಮಾನವ ರೂಪಿ ಬಸವಣ್ಣ ಪ್ರಾಣಿರೂಪಿ ಎತ್ತಾದುದನ್ನು ವಿವರಿಸುವ ಗುರುಗಳು ಕೊನೆಯಲ್ಲಿ ಬರೆಯುವುದನ್ನು ಗಮನಿಸಿ.

`ಬಸವಣ್ಣನ ನಂತರ ಆತನ ಸ್ಮಾರಕಗಳು ಎತ್ತುಗಳಾಗಿಯೇ ಚಿತ್ರಿಸಲ್ಪಟ್ಟವು. ಹೆಸರು ಬಸವಣ್ಣನದಾಯಿತು, ಆಕಾರ ಮಾತ್ರ ಎತ್ತುಗಳದೇ ಆಯಿತು. ಪರಿಣಾಮವಾಗಿ ಬಸವಣ್ಣನು ಹಿಂದಾದನು, ಎತ್ತು ಮುಂದಾಯಿತು. ಏಕೆಂದರೆ ಇಲ್ಲಿನ ಜನಸಾಮಾನ್ಯರು ಓದಿದವರಲ್ಲ. ಓದಿದವರಿದ್ದರೂ ವಿಚಾರ ವಿಮರ್ಶೆ ಮಾಡುವ ಪರಿಪಾಠದವರಲ್ಲ. ತತ್ಫಲವಾಗಿ ಕಲ್ಯಾಣದ ಕಣ್ಮಣಿ ಬಸವಣ್ಣನು ಜನರ ಸ್ಮೃತಿಪಟಲದಿಂದ ದೂರವಾಗಿ ನಿಂತನು. ಇದು ಕಾರಣ ಬಸವಣ್ಣ ಬಸವಣ್ಣನೇ ವಿನಃ ಎತ್ತಲ್ಲ. ಹಿಂದಿನ ಕಾಲವೇನಾದರಾಗಲಿ, ಮುಂದಿನ ಕಾಲದಲ್ಲಾದರೂ ಬಸವಣ್ಣನು ಬಸವಣ್ಣನಾಗಿಯೇ ಉಳಿಯಬೇಕು. ಯಾವ ಸದುದ್ದೇಶವೇ ಇರಲಿ, ದುರುದ್ದೇಶವೇ ಇರಲಿ; ಜನತೆಯಲ್ಲಿ ದುರುಪಯೋಗವಾಗುವುದು, ತಪ್ಪು ಕಲ್ಪನೆ ಮಾಡಿಕೊಳ್ಳುವುದು, ಅಂಧಶ್ರದ್ಧೆಯನ್ನಿಡುವುದು ಸ್ವಾಭಾವಿಕ. ಬಸವಣ್ಣನು ಇವೆಲ್ಲಕ್ಕೂ ಕಡುವೈರಿ. ಅಂತೆಯೇ ಧಾರ್ಮಿಕ ರಂಗದಲ್ಲಿ ಮನೆಮಾಡಿಕೊಂಡಿದ್ದ ಅಂಧ ಶ್ರದ್ಧೆಯನ್ನು ನಿರ್ಮೂಲ ಮಾಡಲು ವಿಚಾರವೆಂಬ ಜೀಜ ಬಿತ್ತಿದನು. ಇಂತಹ ವಿಚಾರಧಾರಿಯಾದ ಬಸವಣ್ಣನ ಬಗ್ಗೆ ಇಂತಪ್ಪ ಅವಿಚಾರದ ವರ್ತನೆಗಳು ನಡೆಯಬಾರದು’ ಎಂದು ಜನರನ್ನು ನಮ್ಮ ಗುರುಗಳು ಜಾಗೃತಿ ಮಾಡುತ್ತಲೇ ಬಂದಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಇನ್ನೂ ಕೆಲವು ವಿದ್ಯಾವಂತರು, ವ್ಯಾಪಾರಿಗಳು, ಅಧಿಕಾರಿಗಳು, ರಾಜಕಾರಣಿಗಳು ಸಹ ಎತ್ತುಗಳನ್ನೇ ಪ್ರಧಾನವಾಗಿರಿಸಿಕೊಂಡು ಬಸವಜಯಂತಿ ಮಾಡುತ್ತಿರುವುದು ವಿಷಾದನೀಯ. ಇನ್ನಾದರೂ ಅವರು ತಮ್ಮ ಮನೋಭಾವನೆ ಬದಲಾಯಿಸಿಕೊಳ್ಳುವ ಸದ್ಬುದ್ಧಿಯನ್ನು ಆ ಬಸವ ಚೇತನವೇ ಕರುಣಿಸಲಿ ಎಂದು ಆಶಿಸುತ್ತೇವೆ.

ನಮ್ಮ ಗುರುಗಳ ಪರಮಶಿಷ್ಯರಲ್ಲೊಬ್ಬರಾಗಿದ್ದ ಸಾಹಿತಿ, ರಾಜಕಾರಣಿ, ಅಪರೂಪದ ಚಿಂತಕ, ಮೋಡಿಯ ಮಾತುಗಾರ ಡಾ. ಮಹಾದೇವ ಬಣಕಾರರು ಎತ್ತುಗಳ ಪೂಜೆ ಮಾಡುವವರನ್ನು ಕಂಡು ಬರೆದಿರುವ ವಚನ ನೋಡಿ.

ಬಸವಣ್ಣಗೊಂದು ಗುಡಿಯ ಕಟ್ಟಿ,
ಬಸವಣ್ಣನೆಂದು ಪಶುವ ಪೂಜಿಪ,
ನರ ಪಶುಗಳಿಗೇನೆಂಬೆನಯ್ಯಾ?

ಬಸವಣ್ಣಂಗೆ ಕೋಡು, ಬಸವಣ್ಣಂಗೆ ಬಾಲ
ಬಸವಣ್ಣಂಗೆ ಪಶುವಿನಭಿದಾನ
ಅಂತಪ್ಪ ಚೋದ್ಯಕ್ಕೆ ಚೆಕ್ಕಸ ಬೆರಗಾಗಿರ್ಪೆನಯ್ಯಾ.
ಬಸವಣ್ಣನೆಂದರೆ ಗುರು,
ಬಸವಣ್ಣನೆಂದರೆ ಲಿಂಗ,
ಬಸವಣ್ಣನೆಂದರೆ ಜಂಗಮ,
ಬಸವಣ್ಣನೆಂದರೆ ಹರನ ಚಿತ್ ಸ್ವರೂಪ.
ಬಸವಣ್ಣನೆಂದರೆ ಬ್ರಹಾಂಡ ಚೈತನ್ಯ,
ಬಸವಣ್ಣನೆಂದರೆ ಪಶುವೆಂಬವನ
ಬಾಯಲ್ಲಿ, ಬೀಳವೇ ಬಾಲಹುಳಂಗಳು?
ಎನ್ನ ವರಗುರು ಶಿವಕುಮಾರ ಪ್ರಭುವೆ.

ಬಸವಣ್ಣನೆಂದರೆ ಎತ್ತೆಂದು ಪೂಜಿಸುತ್ತ ಬಂದವರು ಬಣಕಾರರ ಈ ವಚನದ ಸಾರವನ್ನು ಅರಿತಾದರೂ ತಮ್ಮ ಮನಸ್ಸಿನ ಕತ್ತಲೆ ಕಳೆದುಕೊಂಡರೆ ಸಂತೋಷ. ನಮಗೆ ಗೊತ್ತಿದ್ದಂತೆ ಈ ಹಿಂದೆ ಪಂಚಪೀಠದ ಬಹುತೇಕ ಗುರುಗಳು, ಜಗದ್ಗುರುಗಳವರಿಗೆ ಬಸವಣ್ಣನ ಹೆಸರು ಕೇಳಿದರೆ ಚೇಳು ಕುಟುಕಿದ ಅನುಭವವಾಗುತ್ತಿತ್ತು. ಹಾಗಾಗಿ ಅವರು ಬಸವಣ್ಣ ಭಕ್ತ, ನಾವು ಗುರುಗಳು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಬಸವಣ್ಣನ ಭಾವಚಿತ್ರದ ಕೆಳಗೆ ತಮ್ಮ ಉತ್ಸವ ಹೋದರೆ ಭಕ್ತನ ಪಾದದ ಕೆಳಗೆ ಹೋದಂತಾಗುತ್ತದೆ ಎಂದು ಸ್ವಾಗತ ಕಮಾನುಗಳಲ್ಲಿದ್ದ ಬಸವಣ್ಣನ ಫೋಟೋಗಳನ್ನೇ ಬಿಚ್ಚಿಸಿದ ಮಹಾನ್ ಜಗದ್ಗುರುಗಳೂ ಇದ್ದಾರೆ. ಅದೇ ಸ್ವಾಗತ ಕಮಾನುಗಳಿಗೆ ಇಳಿಬಿಟ್ಟಿದ್ದ ಶೂಟು, ಬೂಟು ಧರಿಸಿದ ನೆಹರು ಅವರ ಚಿತ್ರವನ್ನೂ ತೆಗೆಯಬೇಕೇ ಎಂದಾಗ `ಇರಲಿ ಪರವಾಯಿಲ್ಲ’ ಎಂದಿದ್ದರಂತೆ. ಅಂದರೆ ಅವರಿಗೆ ಬಸವಣ್ಣನವರ ಬಗ್ಗೆ ಎಷ್ಟೊಂದು ಮತ್ಸರ, ಹೊಟ್ಟೆಕಿಚ್ಚು ಇತ್ತು ಎನ್ನುವುದು ಇದರಿಂದಲೇ ವ್ಯಕ್ತವಾಗುವುದು. ಆದರೆ ಲಿಂಗಾಯತವೇ ಬೇರೆ, ವೀರಶೈವವೇ ಬೇರೆ ಎನ್ನುವ ವಾದ ಬಲವಾಗುತ್ತಿದ್ದಂತೆ ಅವರು ಸಹ ಜಾಗೃತರಾಗಿ ಬಸವಣ್ಣನವರ ವಚನಗಳನ್ನು ತಮ್ಮ ಆಶೀರ್ವಚನದಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಹಾಗಂತ ಅವರಿಗೆ ಬಸವಭಕ್ತಿ ಉದಯವಾಗಿದೆ ಎಂದು ಯಾರೂ ಭಾವಿಸಬೇಕಾಗಿಲ್ಲ.

ಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು’ ಎನ್ನುವುದನ್ನು ಆ ಮಹಾಗುರುಗಳು ಈಗಲೂ ಒಪ್ಪಲು ಸಿದ್ಧರಿಲ್ಲ. `ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಗುರು, ಲಿಂಗ, ಜಂಗಮ’ ಎನ್ನುವ ನುಡಿಮುತ್ತು ಶರಣರದೇ. `ಪೂರ್ವಾಚಾರಿ ಬಸವಣ್ಣ’ ಎಂದು ಸ್ತುತಿಸಿದ್ದಾರೆ. `ಬಸವ ಗುರುವಿನಿಂದ ಪಾವನವಾದೆ’ ಎಂದು ಮನದುಂಬಿ ಸ್ಮರಿಸಿಕೊಂಡಿದ್ದಾರೆ. `ಇಷ್ಟಲಿಂಗ ಜನಕ ಬಸವಣ್ಣ’ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಅರಿತಿದ್ದರೂ 26ರ `ವಿಯಜವಾಣಿ’ ದಿನಪತ್ರಿಕೆಯಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು `ಬಸವಣ್ಣನವರು ವೀರಶೈವ ಧರ್ಮದ ಉದಾತ್ತ ತತ್ವಗಳಿಗೆ ಮಾರು ಹೋಗಿ ವೀರಶೈವ ಧರ್ಮವನ್ನು ಸ್ವೀಕರಿಸಿದರು.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಿದ್ಧಾಂತವನ್ನು ಅರ್ಥೈಸಿಕೊಂಡು ಆಚರಣೆ ಮಾಡಿಕೊಂಡು ಬಂದ ಮಹಾನುಭಾವ’ ಎಂದು ಹೇಳಿದ್ದಾರೆ. ಮುಂದುವರಿದು `ಏಣಿಯ ಮೆಟ್ಟಿಲುಗಳಿಗೆ ಬೆಂಕಿಯಿಟ್ಟು ಚಳಿ ಕಾಯಿಸಬಾರದು. ತಾತ್ಕಾಲಿಕ ಸುಖಕ್ಕಾಗಿ ಆದರ್ಶಗಳನ್ನು ಬಲಿ ಕೊಡಬಾರದೆಂಬ ಬಸವಣ್ಣನವರ ದೂರದೃಷ್ಟಿ ಅದ್ಭುತವಾದುದು. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠವೆಂದು ಸಾರಿದ ಬಸವಣ್ಣನವರು ಜಾತಿ ಮತ ಪಂಥಗಳೆನ್ನದೆ ಎಲ್ಲರ ಉನ್ನತಿಗಾಗಿ ಶ್ರಮಿಸಿದ ಚಿಂತಕ. ಬಸವಣ್ಣನವರ ಹೆಸರಿನಲ್ಲಿ ಇಂದು ಸಮಾಜ ಛಿದ್ರಗೊಳಿಸುವ ಜನರಿದ್ದಾರೆ. ಅಂಥವರ ಬಗೆಗೆ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಲಿ’ ಎನ್ನುವ ಕರೆ ಕೊಟ್ಟಿದ್ದಾರೆ.

ಯಾರ ಮನಸ್ಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಈಗ ಯಾರೂ ಇಲ್ಲ `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವ ಹಾಗೆ ಎಲ್ಲರೂ ಜ್ಞಾನಿಗಳಾಗಿ ಇದುವರೆಗೂ ನಡೆದುಕೊಂಡು ಬಂದಿದ್ದ ಕುಟಿಲತೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಬಸವಣ್ಣ ವೀರಶೈವ ಧರ್ಮವನ್ನು ಸ್ವೀಕರಿಸಿದರು ಎನ್ನುವ ಮಾತೇ ಅಪ್ಪಟ ಸುಳ್ಳು. ಅವರು ಲಿಂಗಾಯತ ಧರ್ಮದ ಪ್ರತಿಪಾದಕರು, ಜನಕರು. ಅವರ ಹೆಸರಿನಲ್ಲಿ ಖಂಡಿತ ಬೆಂಕಿಯಿಟ್ಟು ಚಳಿ ಕಾಯಿಸಬಾರದು. ಬಸವಗುರುವಿನ ಸಂದೇಶಗಳನ್ನು ಅರಿತು ಸಮಾಜಕ್ಕೆ ಮಾರ್ಗದರ್ಶನ ಮಾಡಿದರೆ ಆಗ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರಗು ಬರುವುದು. ಈ ಸತ್ಯವನ್ನು ಅರಗಿಸಿಕೊಳ್ಳುವ ಮನಸ್ಸು ಹಲವರಿಗಿಲ್ಲ ಎನ್ನುವುದು ನಮಗೂ ಗೊತ್ತು. ಪರಂಪರೆಯ ಕೆಸರಲ್ಲಿ ಮುಳುಗಿದವರಿಗೆ ಅಲ್ಲಿಂದ ಹೊರಬರುವ ಬಯಕೆ ಇದ್ದರೆ ತಾನೆ ಶುದ್ಧ ನೀರಿನ ಮಹತ್ವ ತಿಳಿಯುವುದು? ಬಸವಾದಿ ಶಿವಶರಣರು ನಿಷ್ಠುರವಾದಿಗಳು. ಹಾಗಂತ ಅಹಂಕಾರಿಗಳಲ್ಲ. ವಿನಯವೇ ಸಾಕಾರವೆತ್ತಂತೆ ಬಾಳಿದವರು. ಹಾಗಾಗಿ ಅಂಥವರ ಪರಿಶುದ್ಧ ಬದುಕಿಗೆ ಮಸಿ ಬಳಿಯುವ ಯಾರೇ ಆದರೂ ಕೊನೆಗೆ ತಾವೇ ತಮ್ಮ ಮುಖಕ್ಕೆ ಮಸಿ ಬಳಿದುಕೊಳ್ಳುವರೆಂಬುದನ್ನು ಮರೆಯಬಾರದು.

ಆದಿ ಬಸವಣ್ಣ, ಅನಾದಿ ಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣವೆಂದರಿದೆನಯ್ಯಾ
ಕೂಡಲಚೆನ್ನಸಂಗಮವೇವಾ.

ಹೌದು ಬಸವಣ್ಣ ಇಷ್ಟಲಿಂಗದ ಜನಕ. ಗುಡಿಯ ದೇವರನ್ನು ದೇಹವೆನ್ನುವ ಗುಡಿಗೆ ಬರಮಾಡಿಕೊಂಡು ದೇವರ ಜಡತ್ವ ನೀಗಿಸಿ ಜಂಗಮತ್ವಗೊಳಿಸಿದ. ಪೌರಾಣಿಕ ಕಲ್ಪನೆಗಳಿಗೆ ಎಳ್ಳು ನೀರು ಬಿಟ್ಟ. ಲಿಂಗೋದ್ಭವ ಎನ್ನುವ ಕಟ್ಟುಕತೆಗೆ ಹೆಡಮುರಿಗೆ ಕಟ್ಟಿದ. ದೇವರಿಗೆ ಮಡಿ ಮೈಲಿಗೆ ಇಲ್ಲವೆಂದು ಸಾರಿದ. ಯಾರು ಬೇಕಾದರೂ ದೇವರನ್ನು ತನ್ನ ಎದೆಯ ಮೇಲೇ ಇಷ್ಟಲಿಂಗದ ರೂಪದಲ್ಲಿ ಧರಿಸಿ ಪೂಜೆ ಮಾಡಬಹುದೆಂದ. ಅದಕ್ಕೆ ಹಾಲಿನ, ತುಪ್ಪದ, ಎಳನೀರಿನ, ಪಂಚಾಮೃತದ ಅಭಿಷೇಕ ಬೇಕಿಲ್ಲ. ನೀನು ಕುಡಿಯುವ ನೀರಿನ ಅಭಿಷೇಕ ಮಾಡಿದರೆ ಸಾಕು, ನೀನು ಊಟ ಮಾಡುವ ಆಹಾರವನ್ನೇ ನೈವೇದ್ಯ ಮಾಡಿದರೆ ಸಾಕು ಎಂದು ಪೂಜಾರಿ ಪುರೋಹಿತರ ಕಪಿಮುಷ್ಠಿಯಿಂದ ಏಕಕಾಲಕ್ಕೆ ದೇವರನ್ನು ಮತ್ತು ಭಕ್ತರನ್ನು ಮುಕ್ತಗೊಳಿಸಿದ. ಇಂಥ ಗುರು ಬಸವಣ್ಣನವರ ಬಗ್ಗೆ ಈಗಲೂ ಹಗುರವಾಗಿ ಮಾತನಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಾದಿ ಶಿವಶರಣರ ಧರ್ಮಗ್ರಂಥಗಳಾಗಿರುವ ವಚನ ಸಾಹಿತ್ಯದ ಗಂಭೀರ ಅಧ್ಯಯನ ಮಾಡಬೇಕು. ಆಗ ಅವರ ಬುದ್ಧಿಗೆ ಕವಿದಿರುವ ಮಂಕು ಮರೆಯಾಗಿ ಮತ್ತೆ ದೀಪ ಪ್ರಖರವಾಗಿ ಬೆಳಗಿ ಬೆಳಕು ಪಸರಿಸುವುದು.