ಕಳಪೆ ಬೀಜ ಮಾರಿದರೆ ರೈತರನ್ನು ಕೊಂದಂತೆ

ಕಳಪೆ ಬೀಜ ಮಾರಿದರೆ ರೈತರನ್ನು ಕೊಂದಂತೆ

ದಾವಣಗೆರೆ,  ಏ.16- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಸಮಯದಲ್ಲಿ ಕಳಪೆ ಬೀಜ ವಿತರಿಸಿದರೆ ರೈತರನ್ನು ನೇರವಾಗಿ ಕೊಲೆ ಮಾಡಿದಂತಾಗುತ್ತದೆ. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ರೈತರಿಗೆ ಮಾರುಕಟ್ಟೆ ಒದಗಿಸುವ ಕುರಿತು ಕರೆಯಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಸಹ ಅವರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ, ಅಂಗಡಿ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.

ಲಾಕ್‍ಡೌನ್ ಅವಧಿಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚಿಸಿದಂತೆ ಕೃಷಿ ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಮಾರುಕಟ್ಟೆಗೆ ಬಂದು ಬೆಳೆ ಮಾರಾಟ ಮಾಡಬಹು ದಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಲಾಕ್‍ಡೌನ್ ತೆರವಾಗಿಲ್ಲ. ಮೈಮರೆ ಯದಂತಹ ಭೀಕರ ಪರಿಸ್ಥಿತಿ ಇದಾಗಿದೆ. ಒಂದು ಸಂತೋಷದ ವಿಷಯವೇನೆಂದರೆ ಇಲ್ಲಿಯವರೆಗೂ ಯಾವೊಬ್ಬ ರೈತರಿಗೂ ಸಹ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ಅವರು ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ನಿರತರಾಗಿರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿ ರುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ರೈತರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಧೃತಿಗೆಡದೆ ಕೃಷಿ ಚಟುವ ಟಿಕೆ ಕಾರ್ಯದಲ್ಲಿ ತೊಡಗಬೇಕು. ಸರ್ಕಾರವು ಸದಾ ನಿಮ್ಮೊಂದಿಗೆ ಇದೆ ಎಂದು ರೈತರಿಗೆ ಭರವಸೆ ನೀಡಿದರು.

ಬೆಳೆ ನಾಶಕ್ಕೆ ಪರಿಹಾರವಿಲ್ಲ: ಬಿ.ಸಿ. ಪಾಟೀಲ್
ದಾವಣಗೆರೆ, ಏ. 16-  ರೈತರು ವಿವಿಧ ಕಾರಣಗಳಿಗಾಗಿ ತಮ್ಮ ಬೆಳೆಗಳನ್ನು ನಾಶ ಮಾಡಿದರೆ ಪರಿಹಾರ ಕೊಡಲಾಗದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರು ಬೆಳೆಗಳ ನಾಶಕ್ಕೆ ಮುಂದಾಗಬಾರದು. ಪ್ರಕೃತಿ ವಿಕೋಪದಡಿ ಬೆಳೆಗಳಿಗೆ ಹಾನಿಯಾದರೆ ಮಾತ್ರ ಸರ್ಕಾರ ಪರಿಹಾರ ನೀಡುತ್ತದೆ ಎಂದು ಹೇಳಿದರು.
ಎಲ್ಲಿಯಾದರೂ ಕಳಪೆ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ರೈತರು ದೂರು ನೀಡಿದರೆ ತಕ್ಷಣವೇ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರ ಕೆಲಸ ಮಾಡುತ್ತಿದ್ದು, ಕೃಷಿಗೆ ತೊಂದರೆ ಆಗದಂತೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ರಾಜ್ಯ ಸರ್ಕಾರ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿ ಕೊಟ್ಟಿದೆ ಎಂದು  ಇದೇ ಸಂದರ್ಭದಲ್ಲಿ  ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೇರೆ ರಾಜ್ಯ, ರಾಷ್ಟ್ರಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲಿ ಸರ್ಕಾರ ತುಂಬಾ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕೃಷಿ ಚಟುವಟಿಕೆಗೆ ಅಡಚಣೆ ಆಗದಂತೆ ರಾಜ್ಯದಲ್ಲಿ ಅನುಕೂಲ ಮಾಡಿಕೊಟ್ಟಿದೆ. ಎಲ್ಲಾ ರೀತಿಯ ಕೃಷಿ ಬೆಳೆಗಳ ಸಾಗಾಣಿಕೆಗೆ ನಿರ್ಬಂಧವಿಲ್ಲ ಎಂದು  ತಿಳಿಸಿದರು

ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ರಾಜ್ಯಮಟ್ಟದಲ್ಲಿ ತಂಡ ರಚಿಸಿ, ಕಾರ್ಯ ನಿರ್ವಹಿಸುತ್ತಿದೆ. ಈ ತಂಡವು ಜಿಲ್ಲೆಗೆ ಬಂದು ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚುವ ವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖ ಲಿಸಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳು ವಿಫಲರಾದಲ್ಲಿ ನೇರವಾಗಿ ಅಧಿಕಾರಿಗ ಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಒಟ್ಟು ಈವರೆಗೆ ಕಳಪೆ ಬೀಜ ಮಾರಾಟ ಮಾಡುವವರ ಮೇಲೆ 32 ಕ್ರಿಮಿನಲ್ ಕೇಸುಗಳನ್ನು ದಾಖಲಿಸಲಾಗಿದೆ ಎಂದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಆಲಿಕಲ್ಲು ಮಳೆಯಿಂದಾಗಿ 29 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗಿಡಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಅಧಿಕವಾಗಿದೆ. 3.20 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದ್ದು, 1.36 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಆಗಸ್ಟ್‍ನಿಂದ ಸೆಪ್ಟೆಂಬರ್‍ವರೆಗೆ ಒಟ್ಟು 1.41 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದ್ದು, 23,241 ಮೆಟ್ರಿಕ್ ಟನ್ ಪ್ರಸ್ತುತ ದಾಸ್ತಾನಿದೆ. ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಬಾರದೆಂದು ಕೃಷಿ ಬೆಳೆ ಸಾಗಾಟಕ್ಕೆ ಹಾಗೂ ಮಾರಾಟಗಾರರಿಗೆ ಸೇರಿದಂತೆ ಒಟ್ಟು 840 ಪಾಸ್‍ಗಳನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಶೇಂಗಾ ಬೀಜವು 3 ಸಾವಿರ ಕ್ವಿಂಟಾಲ್ ಅಗತ್ಯವಿದ್ದು, 2 ಸಾವಿರ ಕ್ವಿಂಟಾಲ್ ದಾಸ್ತಾನು ಇದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ ಮಾತನಾಡಿ, ಜಿಲ್ಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳಿಗೆ ಎರಡು ಕಡೆ ಮಾರುಕಟ್ಟೆ ತೆರೆಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ ಎಂದರು.

ಕೃಷಿ ಬೆಳೆಗಳ ಮಾರಾಟ ಸಂಘದ ಅಧ್ಯಕ್ಷ ಮುರುಗೇಶಪ್ಪ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ರೈತರ ಬೆಳೆಗೆ ಮಾರುಕಟ್ಟೆ ಲಭಿಸದ ಹಿನ್ನೆಲೆಯಲ್ಲಿ ಸ್ವತಃ ನೇರವಾಗಿ ರೈತರಿಂದ ತರಕಾರಿ ಹಣ್ಣುಗಳನ್ನು ಖರೀದಿಸಿ, ನಗರದ ನಾಗರಿಕರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಗಾಟ ವೆಚ್ಚ ಅಧಿಕವಾಗಿದ್ದು, ಪರಿಹಾರಕ್ಕಾಗಿ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಸಾಗಾಟ ವೆಚ್ಚಕ್ಕೆ ತಗಲುವ ವಾಹನ ಬಾಡಿಗೆಯನ್ನು ನೀಡುವ ಭರವಸೆ ನೀಡಿದರು.

ಶಾಸಕರುಗಳಾದ ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಸ್.ಎ.ರವೀಂದ್ರ ನಾಥ್ ಅವರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸ ವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತ ರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.