ಕಣ್ಣಾಮುಚ್ಚಾಲೆ

ಕಣ್ಣಾಮುಚ್ಚಾಲೆ

ಏನೆಂದು ಬರೆಯಲಿ ಹೇಳಿ
ಬೇಡವೆಂದಾಗ ಸಿಗುವ
ಪುಕ್ಕಟೆ ಪದಗಳ ರಾಶಿ
ಬರೆಯಲು ಕುಳಿತರೆ
ಕಣ್ಣಾಮುಚ್ಚಾಲೆ ಆಡಿಸಿವೆ.
ನನ್ನ ಕವಿತೆಯ ಸಾಲಲ್ಲಿ
ಕೂರಲು ಸೊಕ್ಕು ಮಾಡಿವೆ
ಇರಲಿ ಎಲ್ಲೆಂದು ಓಡುವವು
ಒಂದು ಕೈ ನೋಡಿಯೇಬಿಡುವೆ.
ಹಾ !! ನೆನಪಾಯಿತು ನೋಡಿ
ಅಂದೊಂದು ದಿನ ಪದಗಳು
ಕುಣಿ-ಕುಣಿದಾಡಿ ಬಂದು
ಬರೆ ನಮ್ಮನ್ನು ಪದ್ಯದ  ಸಾಲಿನಲ್ಲಿ
ಎಂದು ಬೊಬ್ಬೆ ಹೊಡೆದಾಗ
ಸಮಯವಿಲ್ಲ ಹೋಗಿ
ನನ್ನನ್ನು ಕಾಡದಿರಿ ಅಂದದ್ದು.
ಈಗ ಮಕ್ಕಳಂತೆ ಹಠ ಮಾಡಿ
ಹುಸಿ ಮುನಿಸು ತೋರುತ್ತಿವೆ
ದಿಕ್ಕಿಗೊಂದು ಓಡಿ
ಬರುವುದಿಲ್ಲ ಎಂದು ಕೂತಿವೆ
ಬಿಡುವುದಿಲ್ಲ ನೋಡಿ
ಪುಸಲಾಯಿಸಿ ಕರೆತರುವೆ
ಕವಿತೆಯಲ್ಲಿ ಕಟ್ಟಿಹಾಕುವೆ.
                                       – ಚಂದನ ಜಿ. ಪಿ