ಉಪ ನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ

ಉಪ ನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ

ದಾವಣಗೆರೆ, ಏ. 24 – ಅಧಿಕಾರಿಗಳು ಹಾಗೂ ಸಿಬ್ಬಂದಿ ಹೌಸ್‌ಫುಲ್. ಸೇವೆ ಸಲ್ಲಿಸಲು ಕಚೇರಿಯ ಸರ್ವರೂ ಸನ್ನದ್ಧ. ಆದರೆ, ಸೇವೆ ಪಡೆಯಲು ಸಾರ್ವಜನಿಕರೇ ಇಲ್ಲ…

ಇದು ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶನಿವಾರ ಕಂಡು ಬಂದ ದೃಶ್ಯ. ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ಇಲಾಖೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ ಒಂದು. ಸರ್ಕಾರ ಲಾಕ್‌ಡೌನ್ ಸಡಿಲಿಕೆಯ ಹಲವಾರು ಕ್ರಮಗಳ ಅನ್ವಯ ಹಸಿರು ಹಾಗೂ ಹಳದಿ ವಲಯಗಳಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗಳನ್ನು ತೆರೆಯಲು ಕ್ರಮ ತೆಗೆದುಕೊಂಡಿದೆ.

ಅದರ ಅನ್ವಯ ಶುಕ್ರವಾರದಂದು ನಗರದ ಉಪ ನೋಂದಣಾಧಿಕಾರಿ ಕಚೇರಿಯನ್ನು ತೆರೆಯಲಾಗಿತ್ತು. ತಿಂಗಳ ಕಾಲದ ಲಾಕ್‌ಡೌನ್ ಕಾರಣದಿಂದಾಗಿ §ಲಾಕ್¬ಗೆ ಗುರಿಯಾಗಿದ್ದ ಕಚೇರಿ ತೆರೆದರೂ ಜನರಾಗಮನ ಭಾಗ್ಯ ಸಿಗಲಿಲ್ಲ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಹಿರಿಯ ಉಪ ನೋಂದಣಾಧಿಕಾರಿ ಬಿ.ಎ. ಸುಬ್ರಹ್ಮಣ್ಯ, ರೈತರು ಬ್ಯಾಂಕುಗಳಿಂದ ಸಾಲ ಪಡೆಯಲು ಅನುಕೂಲ ಮಾಡಿಕೊಡುವ ಪ್ರಮುಖ ಉದ್ದೇಶದಿಂದ ಕಚೇರಿಯನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಲಾಕ್‌ಡೌನ್ ಅವಧಿಯಲ್ಲಿ ಆಸ್ತಿಗಳ ಮಾರಾಟ ಹಾಗೂ ನೋಂದಣಿಯ ಉದ್ದೇಶಕ್ಕಿಂತಲೂ ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದೆ. ಇತರೆ ನಾಗರಿಕರೂ ಸಹ ಬ್ಯಾಂಕುಗಳಿಂದ ಸಾಲ ಪಡೆಯಲು ಹಾಗೂ ಬಾಡಿಗೆಯ ಒಪ್ಪಂದಗಳನ್ನು ನೋಂದಣಿ ಮಾಡಿಸಲು ಈ ಕ್ರಮ ನೆರವಾಗಲಿದೆ ಎಂದು ಹೇಳಿದರು.

ನೋಂದಣಿ ಮಾಡಿಕೊಳ್ಳಲು ಬಯಸುವವರಿಗೆ ಆನ್‌ಲೈನ್ ಮೂಲಕ ಪಾಸ್
ಸಾಮಾಜಿಕ ಅಂತರಕ್ಕಾಗಿ ಗಂಟೆಗೆ ಮೂರು ನೋಂದಣಿ ಮಾತ್ರ ಸಾಧ್ಯ
ರೈತರು ಹಾಗೂ ಸಾರ್ವಜನಿಕರು ಬ್ಯಾಂಕ್ ಸಾಲ ಪಡೆಯಲು ನೆರವು

ಆಸ್ತಿಗಳನ್ನು ಮಾರುವವರು ಹಾಗೂ ಖರೀದಿ ಮಾಡುವವರಿಬ್ಬರೂ ನಗರದವರೇ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆ ಸುಲಭವಾಗಲಿದೆ. ಜನರಿಗೆ ನೆರವಾಗುವ ಸಲುವಾಗಿ ನೋಂದಣಿ ಕಾರ್ಯಕ್ಕೆ ಬರುವ ಖರೀದಿ ಹಾಗೂ ಮಾರಾಟಗಾರರು ಮತ್ತು ಸಾಕ್ಷಿದಾರರು ಹಾಗೂ ಪತ್ರಬರಹಗಾರರಿಗೆ ಆನ್‌ಲೈನ್ ಮೂಲಕವೇ ಪಾಸ್‌ಗಳನ್ನು ನೀಡಲಾಗುತ್ತಿದೆ ಎಂದವರು ತಿಳಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ಕೋವಿಡ್ -19 ಪ್ರಯುಕ್ತ ಅನುಬಂಧ -1ರ ಅನ್ವಯ ಆನ್‌ಲೈನ್ ಪಾಸ್ ನೀಡಲಾಗುತ್ತದೆ. ಇದನ್ನು ಹಾಜರುಪಡಿಸುವವರಿಗೆ ಪೊಲೀಸರು ಹಾಗೂ ಸಿಬ್ಬಂದಿ ವರ್ಗದವರು ಅವಕಾಶ ಕಲ್ಪಿಸುತ್ತಾರೆ. ಆದರೆ, ಪಾಸ್‌ನಲ್ಲಿ ನಿಗದಿಪಡಿಸ ಲಾಗಿರುವ ದಿನಾಂಕದಂದು ಮಾತ್ರ ಈ ಪಾಸ್ ಚಾಲ್ತಿಯಲ್ಲಿರುತ್ತದೆ ಎಂದವರು ವಿವರಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಗಳ ನಡುವೆ ಪ್ರಯಾಣ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಸ್ಥಿರಾಸ್ತಿ ವಹಿವಾಟುಗಳು ಬೇರೆ ಬೇರೆ ಜಿಲ್ಲೆಗಳ ನಡುವೆ ಇರುವವರ ಮಧ್ಯೆ ನಡೆಯುವುದು ಕಷ್ಟಸಾಧ್ಯವಾಗಿದೆ ಎಂದು ಉಪ ನೋಂದಣಾಧಿಕಾರಿ ಎಲ್. ರಾಮಕೃಷ್ಣ ತಿಳಿಸಿದ್ದಾರೆ.

ಶುಕ್ರವಾರದಂದು ಯಾರೂ ಕಚೇರಿಗೆ ಬಂದಿಲ್ಲ. ಆದರೆ, ನಾವು ನೋಂದಣಿ ಕಾರ್ಯಗಳಿಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸೋಮವಾರದಿಂದ ಜನರು ಆಗಮಿಸುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.

ಸಾರ್ವಜನಿಕ ಅಂತರವನ್ನು ಕಾಯ್ದುಕೊಳ್ಳುತ್ತಲೇ ಕಚೇರಿಯ ಸೇವೆ ಸಲ್ಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಗಂಟೆಗೆ ಮೂರು ನೋಂದಣಿ ಮಾತ್ರ ಸಾಧ್ಯವಾಗಲಿದೆ ಎಂದವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಗಿಜಿಗುಡುತ್ತಿದ್ದ ಉಪ ನೋಂದಣಾಧಿಕಾರಿ ಕಚೇರಿ ಬಣಗುಡುತ್ತಿತ್ತು. ಪತ್ರಬರಹಗಾರರು ಹಾಗೂ ಸಾರ್ವಜನಿಕರಿಲ್ಲದೇ ಸಿಬ್ಬಂದಿಯಷ್ಟೇ ಕಚೇರಿಯಲ್ಲಿದ್ದರು. ಸೋಮವಾರದಿಂದಲಾದರೂ ಲಾಕ್‌ಡೌನ್ ಗ್ರಹಣದಿಂದ ಕಚೇರಿಗೆ ಮೋಕ್ಷ ಸಿಗಬಹುದಾಗಿದೆ.